ಕಾಸರಗೋಡು: ಮನುಕುಲದ ಆದಿ ಕಾವ್ಯವೆಂದೇ ಪರಿಗಣಿಸಲ್ಪಟ್ಟಿರುವ ಚುಟುಕು ಸಾಹಿತ್ಯ ಮನಸ್ಸಿಗೆ ಲಾಲಿತ್ಯ ನೀಡುವ ಕಲೆಯಾಗಿರುವುದಾಗಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಚಾಲಕ ಡಾ.ಎಂ.ಜಿ.ಆರ್ ಅರಸ್ ಅಭಿಪ್ರಾಯಪಟ್ಟರು.
ಅವರು ಕಾಸರಗೋಡು ಪಾರೆಕಟ್ಟದ ಕನ್ನಡಗ್ರಾಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಚುಟುಕು ಸಹಿತ್ಯ ಪರಿಷತ್ ಸಹಯೋಗದೊಂದಿಗೆ ಭಾನುವಾರ ನಡೆದ ಕಾಸರಗೋಡು ಜಿಲ್ಲಾ 6ನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಚುಟುಕು ಕವಿ, ವಯಂಗ್ಯ ಚಿತ್ರಕಾರ ವೆಂಕಟ ಭಟ್ ಎಡನೀರು ಸಮ್ಮೇಳನಾಧ್ಯಕ್ಷರಾಗಿದ್ದರು. ಈ ಸಂದರ್ಭ ವೈದ್ಯ ಸಾಹಿತಿ ಡಾ. ಕೆ. ರಮಾನಂದ ಬನಾರಿ ಅವರಿಗೆ ಖಂಡಿಗೆ ಶ್ಯಾಮ ಭಟ್-2022 ಸಾಹಿತ್ಯ ಪ್ರಶಸ್ತಿಯನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪ್ರದಾನ ಮಾಡಿ, ಆಶೀರ್ವಚನ ನೀಡಿ, ಸಮಾಜವನ್ನು ತಿದ್ದುವುದರ ಜತೆಗೆ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಚುಟುಕು ಸಾಹಿತ್ಯ ಮಹತ್ವದ ಪಾತ್ರ ವಹಿಸಿರುವುದಾಗಿ ತಿಳಿಸಿದರು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ ಮಾಧ್ಯಮ ಪ್ರಶಸ್ತಿ, ಬಿ.ವಿಜಯ ಕುಮಾರ್ ಉಡುಪಿ ಮತ್ತು ಯು.ಆರ್. ಶೆಟ್ಟಿ ಮಂಗಳೂರು ಅವರಿಗೆ ಚು.ಸಾ.ಪ ಸಾಧಕ ಪ್ರಶಸ್ತಿ, ವಿವಿಧ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪುಸ್ತಕ ಪ್ರದರ್ಶನವನ್ನು ದ. ಕ ಜಿಲ್ಲಾ ಚು.ಸಾ.ಪ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಕಲಾ ಪ್ರದರ್ಶನವನ್ನು ಕಾ.ವೀ ಕೃಷ್ಣದಾಸ್ ಉಸ್ಘಾಟಿಸಿದರು. ಹೊಸ ಕೃತಿಗಳನ್ನು ದ.ಕ ಜಿಲ್ಲಾ ಚು.ಸಾ.ಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಬಿಡುಗಡೆಗೊಳಿಸಿದರು. ಡಾ. ಮಂಜುನಾಥ ಎಸ್. ರೇವಣ್‍ಕರ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ನಗರಸಭಾ ಸದಸ್ಯೆ ಉಷಾ ಸುರೇಶ್, ಮಾಜಿ ಸದಸ್ಯ ಶಂಕರ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೊದಲು ನಡೆದ ಮೆರವಣಿಗೆಯನ್ನು ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಉದ್ಘಾಟಿಸಿದರು. ನಗರಸಭಾ ಸದಸ್ಯೆ ಶಾರದಾ ಬಿ ರಾಷ್ಟ್ರಧ್ವಜ, ಶಿವರಾಮ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ ಧ್ವಜಾರೋಹಣ ನಡೆಸಿದರು.
ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿವಿಧ ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.