ಚೆನ್ನೈ: ರಾಷ್ಟ್ರೀಯ ಸ್ವಯಂಸೇವಾ ಸಂಘ(RSS) ರಾಜ್ಯದ 51 ಸ್ಥಳಗಳಲ್ಲಿ ನವೆಂಬರ್ 6ರಂದು ಆಯೋಜಿಸಿದ್ದ ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.
ಅಕ್ಟೋಬರ್ 02ರಂದು ಆಯೋಜನೆಯಾಗಿದ್ದ ಆರ್ ಎಸ್ ಎಸ್ ಪಥ ಸಂಚಲನವನ್ನು ನವೆಂಬರ್ 6ರಂದು ನಡೆಸುವಂತೆ ಹೊರಡಿಸಿದ ಆದೇಶವನ್ನು ಅಧಿಕಾರಿಗಳು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಜಿ ಕೆ ಇಳಂತಿರಾಯನ್ ಸ್ಪಷ್ಟಪಡಿಸಿದ್ದಾರೆ.
ಕೆಲವು ಷರತ್ತುಗಳೊಂದಿಗೆ ಅಕ್ಟೋಬರ್ 2ರಂದು ಆರ್‌ಎಸ್‌ಎಸ್ ಮೆರವಣಿಗೆ ನಡೆಸಲು ನ್ಯಾಯಾಲಯವು ಮೊದಲು ಅನುಮತಿ ನೀಡಿತ್ತು. ಆದರೆ ನಂತರ ರಾಜ್ಯ ಸರ್ಕಾರವು ಎಲ್ಲಾ ಸಂಘಟನೆಗಳಿಗೆ ಮೆರವಣಿಗೆ ಅಥವಾ ರ್ಯಾಲಿಗಳನ್ನು ನಡೆಸಲು ಅನುಮತಿ ನಿರಾಕರಿಸಿತು. ಮೆರವಣಿಗೆಗೆ ಅನುಮತಿ ನೀಡಲು ನಿರಾಕರಿಸಿದ ರಾಜ್ಯ ಸರ್ಕಾರದ ವಿರುದ್ಧ ಆರ್‌ಎಸ್‌ಎಸ್ ಗುರುವಾರ ಹೈಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿತ್ತು.
ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ) ಸಂಸದ ತೊಳ್ ತಿರುಮಾವಳವನ್ ಅವರು ಸಿಪಿಐ ಮತ್ತು ಸಿಪಿಐ(ಎಂ) ನಾಯಕರೊಂದಿಗೆ ಚೆನ್ನೈನಲ್ಲಿ ತಮಿಳುನಾಡು ಡಿಜಿಪಿಗೆ ಮನವಿ ಸಲ್ಲಿಸಿದರು. ಅಕ್ಟೋಬರ್ 2ರ ಗಾಂಧಿ ಜಯಂತಿ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಮಾನವ ಸರಪಳಿ ಆಯೋಜಿಸಲು ಅನುಮತಿ ನೀಡುವಂತೆ ಕೋರಿದರು.