ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ (ಸೆ.17) ಹಿನ್ನೆಲೆಯಲ್ಲಿ 1,222 ಉಡುಗೊರೆಗಳನ್ನು ಹರಾಜು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದ್ದಾರೆ. ಸೆ. 17 ರಿಂದ ಅ.2ರ ತನಕ ಹರಾಜು ಪ್ರಕ್ರಿಯೆ ನಡೆಯಲಿದೆ.
2019ರಲ್ಲಿ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆದಿದ್ದು, 1805 ಉಡುಗೊರೆಗಳು ಹರಾಜಾಗಿದ್ದವು. 2021 ರಲ್ಲಿ 2772 ಉಡುಗೊರೆ ಹರಾಜಾಗಿತ್ತು. ಈ ಬಾರಿ 1222 ಉಡುಗೊರೆಗಳನ್ನು ಮೂಲಬೆಲೆ ನಿರ್ಧರಿಸಿ ಹರಾಜಿಗಿಡಲಾಗುತ್ತಿದೆ. ಹರಾಜಾಗುತ್ತಿರುವ ಉಡುಗೊರೆಗಳು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಪ್ರದರ್ಶನವಾಗುತ್ತಿದೆ. ಹರಾಜಿನಿಂದ ಬಂದ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ಬಳಸಲಾಗುತ್ತದೆ. pmmementos.gov.in ಮೂಲಕ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಹರಾಜಿನಲ್ಲಿ ವರ್ಣಚಿತ್ರಗಳು, ಶಿಲ್ಪಗಳು, ಕರಕುಶಲ ವಸ್ತುಗಳು ಮತ್ತು ಜಾನಪದ ಕಲಾಕೃತಿಗಳು ಸೇರಿವೆ. ಕಾಶಿ ವಿಶ್ವನಾಥ ಮಂದಿರ, ರಾಮ ಮಂದಿರದ ಮಾದರಿ ಕಲಾಕೃತಿಗಳು ಸಹಿತ ಹರಾಜಿನಲ್ಲಿರಲಿವೆ. 2022ರ ಕಾಮನ್ವೆಲ್ತ್ ಗೇಮ್ಸ್, 2022ರ ಥಾಮಸ್ ಕಪ್ ಚಾಂಪಿಯನ್ಸ್ಶಿಪ್ನಲ್ಲಿ ಬಳಕೆಯಾದ 25 ಕ್ರೀಡಾ ವಸ್ತುಗಳು ಇರಲಿವೆ ಎಂದು ಹೇಳಿದ್ದಾರೆ.