ನವದೆಹಲಿ :ಫಿಚ್ ರೇಟಿಂಗ್ಸ್ ಪ್ರಸಕ್ತ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆಯ ತನ್ನ ಮುನ್ನಂದಾಜನ್ನು ಶೇ.7ಕ್ಕೆ ತಗ್ಗಿಸಿದೆ. ಕಳೆದ ಜೂನ್‌ನಲ್ಲಿ ಅದು ಶೇ.7.8ರಷ್ಟು ಬೆಳವಣಿಗೆಯನ್ನು ಅಂದಾಜಿಸಿತ್ತು.
ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನೂ ಅದು ಹಿಂದಿನ ಶೇ.7.4ರ ಅಂದಾಜಿನಿಂದ ಶೇ.6.7ಕ್ಕೆ ತಗ್ಗಿಸಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ,ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬಿಗು ಹಣಕಾಸು ನೀತಿಗಳನ್ನು ತನ್ನ ಇತ್ತೀಚಿನ ಅಂದಾಜು ಪರಿಷ್ಕರಣೆಗೆ ಕಾರಣಗಳನ್ನಾಗಿ ಉಲ್ಲೇಖಿಸಿರುವ ಫಿಚ್,ಕಚ್ಚಾತೈಲ ಬೆಲೆಗಳ ಇಳಿಕೆಯಿಂದಾಗಿ ಆಗಸ್ಟ್‌ನಲ್ಲಿ ಹಣದುಬ್ಬರವೂ ಕಡಿಮೆಯಾಗಿತ್ತು,ಆದರೆ ಈ ವರ್ಷಾಂತ್ಯದಲ್ಲಿಯ ಸಂಭಾವ್ಯ ಋಣಾತ್ಮಕ ಋತುಮಾನಗಳನ್ನು ಪರಿಗಣಿಸಿದರೆ ಆಹಾರ ಹಣದುಬ್ಬರವು ಮುಂದುವರಿಯುವ ಅಪಾಯವಿದೆ ಎಂದು ಹೇಳಿದೆ.
2022ರ ಅಂತ್ಯದ ವೇಳೆಗೆ ಡಾಲರ್‌ನೆದುರು ರೂಪಾಯಿ 79ರಲ್ಲಿ ಉಳಿದುಕೊಳ್ಳಲಿದೆ ಮತ್ತು ಚಿಲ್ಲರೆ ಹಣದುಬ್ಬರವು ಸುಮಾರು ಶೇ.6.2ರಲ್ಲಿ ಇರಲಿದೆ ಎಂದು ಫಿಚ್ ತಿಳಿಸಿದೆ.
ಆರ್‌ಬಿಐ ಬಡ್ಡಿದರಗಳನ್ನು ಮೇಲ್ಮುಖವಾಗಿ ಪರಿಷ್ಕರಿಸಲಿದೆ ಮತ್ತು ಮುಂದಿನ ವರ್ಷದುದ್ದಕ್ಕೂ ಶೇ.6ರ ಮಟ್ಟದಲ್ಲಿ ಇರಲಿದೆ ಎಂದು ತಾನು ನಿರೀಕ್ಷಿಸಿರುವುದಾಗಿ ಫಿಚ್ ಹೇಳಿದೆ. ಸೆ.1ರಂದು ಜಾಗತಿಕ ರೇಟಿಂಗ್ಸ್ ಸಂಸ್ಥೆ ಮೂಡಿಸ್ ಪ್ರಸಕ್ತ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆಯ ತನ್ನ ಮುನ್ನಂದಾಜನ್ನು ಶೇ.7.7ಕ್ಕೆ ತಗ್ಗಿಸಿತ್ತು. ಮೇ ತಿಂಗಳಿನಲ್ಲಿ ಅದು ಶೇ.8.8ರಷ್ಟು ಆರ್ಥಿಕ ಬೆಳವಣಿಗೆಯನ್ನು ಅಂದಾಜಿಸಿತ್ತು. ಮುಂದಿನ ಹಣಕಾಸು ವರ್ಷದ ಅಂದಾಜನ್ನೂ ಅದು ಶೇ.5.4ರಿಂದ ಶೇ.5.2ಕ್ಕೆ ತಗ್ಗಿಸಿತ್ತು.