ಸಿಡ್ನಿ: ಸಾಕಿದ ಯಜಮಾನನ್ನೇ ಕಾಂಗರೂ ಕೊಂದಿದೆ. ಇಂತಹ ಘಟನೆ ಪಶ್ಚಿಮ ಆಸ್ಟ್ರೇಲಿಯಾದ ರೆಡ್ಮಂಡ್ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಆಸ್ಟ್ರೇಲಿಯಾ ಜನ ಶಾಕ್ ಆಗಿದ್ದಾರೆ. ಸಸ್ಯಹಾರಿಯೂ ಆದ ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರಪ್ರಾಣಿ ಕೂಡ.
ಕಾಂಗರೂ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟದ್ದು 8 ದಶಕದಲ್ಲಿ ಇದೇ ಮೊದಲು ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ಆಸ್ಟ್ರೇಲಿಯಾದ ರೆಡ್ಮಂಡ್ ಪಟ್ಟಣದಲ್ಲಿ 77 ವರ್ಷದ ವ್ಯಕ್ತಿಯೊಬ್ಬರು ಕಾಂಗರೂವನ್ನು ಹಲವರು ವರ್ಷಗಳಿಂದ ಮನೆಯಲ್ಲಿ ಸಾಕಿದ್ದರು. ಅದೇ ಕಾಂಗರೂ ಭಾನುವಾರ ತನ್ನ ಯಜಮಾನನ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವೃದ್ಧನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಇನ್ನು ವೃದ್ಧನ ಮೇಲೆ ಕಾಂಗರೂ ದಾಳಿ ಮಾಡುವುದನ್ನ ನೋಡಿದ ಸ್ಥಳೀಯರು, ಇದನ್ನು ತಡೆಯಲು ಹರಸಾಹಸ ಪಡೆಬೇಕಾಯಿತು. ಆಂಬುಲೆನ್ಸ್ ಸಿಬ್ಬಂದಿ, ಗಾಯಗೊಂಡ ವೃದ್ಧನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸುವಾಗಲೂ ಕಾಂಗರೂ ಸುಮ್ಮನಿರದೆ ಮತ್ತೆ ದಾಳಿಗೆ ಯತ್ನಿಸಿತ್ತು. ಕೊನೆಗೆ ಬೇರೆ ದಾರಿಯಿಲ್ಲದೆ ಕಾಂಗರೂಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1936ರಲ್ಲಿ ಕಾಂಗರೂವೊಂದು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿತ್ತು. ಇದೀಗ ಅಂದರೆ 8 ದಶಕಗಳ ಬಳಿಕ ಕಾಂಗರೂ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಶ್ಚಿಮ ಆಸ್ಟ್ರೇಲಿಯಾದ ಗ್ರೇಟ್ ಸದರ್ನ್ ಪ್ರದೇಶವು ಕಾಂಗರೂಗಳಿಗೆ ನೆಲೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಸುಮಾರು 50 ಮಿಲಿಯನ್ ಕಾಂಗರೂಗಳಿವೆಯಂತೆ.