ನವದೆಹಲಿ : ಸ್ಪೈಸ್‌ಜೆಟ್ ಕಂಪನಿಯು 80 ಪೈಲಟ್‌ಗಳಿಗೆ ಮೂರು ತಿಂಗಳ ಅವಧಿಗೆ ವೇತನ ರಹಿತ ರಜೆ ಪಡೆದುಕೊಳ್ಳುವಂತೆ ಮಂಗಳವಾರ ಸೂಚಿಸಿದೆ. ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಲು ತಾತ್ಕಾಲಿಕವಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿ ಹೇಳಿದೆ.
'ಯಾವ ನೌಕರನನ್ನೂ ಕೆಲಸದಿಂದ ತೆಗೆಯಬಾರದು ಎಂಬುದು ಕಂಪನಿಯ ನಿಯಮ. ಅದಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸಾಂಕ್ರಾಮಿಕವು ತೀವ್ರವಾಗಿದ್ದಾಗಲೂ ಕಂಪನಿಯು ಈ ನಿಯಮ ಪಾಲಿಸಿತ್ತು. ಈ ಕ್ರಮವು ಪೈಲಟ್‌ಗಳನ್ನು ಹೆಚ್ಚು ದಕ್ಷವಾಗಿ ಬಳಸಿಕೊಳ್ಳಲು ನೆರವಾಗುತ್ತದೆ' ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
'ಕಂಪನಿ ಎದುರಿಸುತ್ತಿರುವ ಹಣಕಾಸಿನ ಬಿಕ್ಕಟ್ಟು ನಮಗೆ ತಿಳಿದಿತ್ತು. ಆದರೆ, ಇಷ್ಟು ತಕ್ಷಣದಲ್ಲಿ ತೀರ್ಮಾನ ಕೈಗೊಂಡಿರುವುದು ಆಘಾತ ತಂದಿದೆ. ಮೂರು ತಿಂಗಳ ನಂತರದಲ್ಲಿ ಕಂಪನಿಯ ಹಣಕಾಸಿನ ಸ್ಥಿತಿ ಹೇಗಿರುತ್ತದೆ ಎಂಬ ವಿಚಾರದಲ್ಲಿ ಖಚಿತತೆ ಇಲ್ಲ. ರಜೆಯ ಮೇಲೆ ತೆರಳುವಂತೆ ಹೇಳಿರುವ ಪೈಲಟ್‌ಗಳನ್ನು ಮತ್ತೆ ವಾಪಸ್ ಕರೆಸಿಕೊಳ್ಳಲಾಗುತ್ತದೆಯೇ ಎಂಬುದೂ ಖಚಿತವಿಲ್ಲ' ಎಂದು ಪೈಲಟ್ ಒಬ್ಬರು ಹೇಳಿದ್ದಾರೆ.