ಮುಂಬೈ: ರೂಪಾಯಿ ಮೌಲ್ಯದ ಕುಸಿತ ಶುಕ್ರವಾರ ಇನ್ನಷ್ಟು ಹಿಗ್ಗಿದೆ. ಡಾಲರ್ ಎದುರು 30 ಪೈಸೆ ಮೌಲ್ಯ ಕಳೆದುಕೊಂಡಿದ್ದು, ವಿದೇಶಿ ವಿನಿಮಯ ದರ 81.08 ರೂಪಾಯಿ ಮುಟ್ಟಿದೆ. ಮಧ್ಯಂತರ ವಹಿವಾಟಿನಲ್ಲಿ 81.23 ರೂಪಾಯಿವರೆಗೂ ಪತನಗೊಂಡಿತ್ತು. ಏಳು ತಿಂಗಳ ಹಿಂದೆ 80.79 ರೂ.ಗೆ ಮುಟ್ಟಿತ್ತು.
ಯೂಕ್ರೇನ್ ಸಂಘರ್ಷ ಹಾಗೂ ಹಣದುಬ್ಬರವನ್ನು ಇಳಿಸಲು ಅಮೆರಿಕ ಮತ್ತು ಇಂಗ್ಲೆಂಡ್ನ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಳ ಮಾಡಿರುವ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಬಲಿಷ್ಠವಾಗಿದ್ದು, ರೂಪಾಯಿ ಮೌಲ್ಯ ಇತ್ತೀಚಿನ ದಿನಗಳಲ್ಲಿ 124 ಪೈಸೆ ಅಧಃಪತನವನ್ನು ಕಂಡಿದೆ.
ರೆಪೊ ದರ ಏರಿಕೆ ಸಾಧ್ಯತೆ: ಹಣದುಬ್ಬರ ಏರಿಕೆ, ಡಾಲರ್ ಎದುರು ರೂ. ದುರ್ಬಲ ವಾಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಆರ್ಬಿಐ ರೆಪೊ ದರವನ್ನು 35 ಮೂಲಾಂಶದ ವರೆಗೂ ಹೆಚ್ಚಿಸುವ ಸಾಧ್ಯತೆ ಇದೆ. ಆರ್ಬಿಐನ ಎಂಪಿಸಿ ಸಭೆ ಸೆ. 30ರಿಂದ ನಡೆಯಲಿದ್ದು, ಅಲ್ಲಿ ಈ ನಿರ್ಧಾರ ಕೈಗೊಳ್ಳುವ ಸಂಭವ ಇದೆ. ಕಳೆದ ಮೇ ತಿಂಗಳಿಂದೀಚೆಗೆ 140 ಮೂಲಾಂಶ ರೆಪೊ ದರ ಏರಿಕೆಯಾಗಿದ್ದು, ಶೇ. 5.40ರ ಕರೊನಾ ಪೂರ್ವಸ್ಥಿತಿಗೆ ಬಂದಿದೆ.
ರೂಪಾಯಿ ಇಳಿಕೆ ಪರಿಣಾಮಗಳು
- ಹೆಚ್ಚುತ್ತಿರುವ ಹಣದುಬ್ಬರದಿಂದ ಆಮದು ವೆಚ್ಚದಲ್ಲಿ ಏರಿಕೆ. ಅಂತಿಮ ಪರಿಣಾಮ ಗ್ರಾಹಕರ ಮೇಲೆ ಹೆಚ್ಚಿದ ಆರ್ಥಿಕ ಭಾರ.
- ಆಮದು ಮೇಲಿನ ವೆಚ್ಚದಲ್ಲಿ ಶೇ. 80ರಷ್ಟು ಖರ್ಚಾಗುವುದು ತೈಲದ ಖರೀದಿಗೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾಗಣೆ ಅವಲಂಬಿಸಿದ ಎಲ್ಲ ಪದಾರ್ಥಗಳ ದರ ಏರುತ್ತದೆ. ಇದು ಹಣದುಬ್ಬರದ ಮೇಲೆ ಒತ್ತಡ ಹೆಚ್ಚಿಸುತ್ತದೆ.
- ತೈಲದ ನಂತರ ಅತಿ ಹೆಚ್ಚು ಅಮದಾಗುವ ಸರಕು ಎಲೆಕ್ಟ್ರಾನಿಕ್ ವಸ್ತುಗಳು. ಹಬ್ಬದ ಸಾಲು ಮತ್ತು ವಾರ್ಷಿಕ ಗ್ರಾಹಕ ಮೇಳದ ಹೆಸರಿನಲ್ಲಿ ಜನರನ್ನು ಖರೀದಿಸಲು ಇವು ಪ್ರೇರೇಪಿಸುತ್ತವೆ.
- ವಿದೇಶಿದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವೆಚ್ಚದ ಹೊರೆೆ.
- ರೂಪಾಯಿ ಮೌಲ್ಯ ಕುಸಿತವು ಭಾರತದಿಂದ ರಫ್ತಾಗುವ ವಸ್ತುಗಳಿಗೆ ಲಾಭದಾಯವಾಗಿರುತ್ತದೆ. ಬೆಲೆಬಾಳುವ ಹರಳು, ಆಭರಣ, ಪೆಟ್ರೋಲಿಯಂ ಉತ್ನನ್ನಗಳು ವಿದೇಶಗಳಿಗೆ ಬಿಕರಿಯಾಗುವುದರಿಂದ ಲಾಭ ಗಳಿಸುತ್ತವೆ.
- ರೂಪಾಯಿ ದುರ್ಬಲತೆಯು ಮಾಹಿತಿ ತಂತ್ರಜ್ಞಾನ, ಔಷಧ ತಯಾರಿಕೆ ವಲಯಕ್ಕೂ ಲಾಭದಾಯಕವಾಗುತ್ತದೆ.
- ಹೊರಗುತ್ತಿಗೆಯ ಮೇಲೆ ವಿದೇಶಿ ಪ್ರಾಜೆಕ್ಟ್ ಮಾಡಿಕೊಡುವ ಉದ್ಯೋಗಿ ಗಳಿಗೆ ಹೆಚ್ಚುವರಿ ಗಳಿಕೆ ಸಿಗುತ್ತದೆ.
ಸೆನ್ಸೆಕ್ಸ್ ಸಾವಿರ ಅಂಶ ನಷ್ಟ
ರೂಪಾಯಿ ಮೌಲ್ಯ ಕುಸಿತ, ಅಮೆರಿಕ ಮತ್ತು ಇಂಗ್ಲೆಂಡ್ ಕೇಂದ್ರೀಯ ಬ್ಯಾಂಕ್ಗಳ ಬಡ್ಡಿ ದರ ಹೆಚ್ಚಳದ ಪರಿಣಾಮ ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಸಾವಿರಕ್ಕೂ ಹೆಚ್ಚು ಪಾಯಿಂಟ್ ಪತನಗೊಂಡಿದೆ. ಇದರಿಂದ ಹೂಡಿಕೆದಾರರ 4.90 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ. ಸೆನ್ಸೆಕ್ಸ್ ಸಂವೇದಿಯಲ್ಲಿ 1,020.80 ಅಂಶ (ಶೇ. 1.73) ಕುಸಿತವಾಗಿದ್ದು, 58,098.92ರಲ್ಲಿ ವಹಿವಾಟು ಮುಗಿಸಿದೆ. ಮಧ್ಯಂತರ ವಹಿವಾಟಿನಲ್ಲಿ 1,137 ಪಾಯಿಂಟ್ ವರೆಗೂ ಇಳಿಕೆ ಆಗಿತ್ತು. ಕಳೆದ ಮೂರು ವಹಿವಾಟಿನಲ್ಲಿ 1,620 ಅಂಶ (ಶೇ. 2.71) ಪತನವನ್ನು ಸೆನ್ಸೆಕ್ಸ್ ಕಂಡಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ 302.45 (ಶೇ. 1.72) ಪಾಯಿಂಟ್ ತಗ್ಗಿದ್ದು, 17,327.35ರಲ್ಲಿ ವಹಿವಾಟು ಕೊನೆಗೊಂಡಿದೆ. ಪವರ್ ಗ್ರಿಡ್, ಎಂ ಆಂಡ್ ಎಂ, ಎಸ್ಬಿಐ, ಬಜಾಜ್ ಫಿನ್ಸರ್ವ್, ಬಜಾಜ್ ಫೈನಾನ್ಸ್, ಎನ್ಟಿಪಿಸಿ, ಎಚ್ಡಿಎಫ್ಸಿ, ಇಂಡಸ್ಇಂಡ್ ಬ್ಯಾಂಕ್ಗಳು ಷೇರು ಮೌಲ್ಯ ಇಳಿಕೆ ಆಗಿದೆ. ಸನ್ ಫಾರ್ವ, ಟಾಟಾ ಸ್ಟೀಲ್, ಐಟಿಸಿಗಳು ಲಾಭದಾಯಕ ವಹಿವಾಟು ನಡೆಸಿವೆ.
ಚಿನ್ನ-ಬೆಳ್ಳಿ ಬೆಲೆ ಇಳಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 139 ರೂ. ಇಳಿಕೆ ಆಗಿದ್ದು, 10 ಗ್ರಾಂ ಚಿನ್ನದ ಧಾರಣೆ 50,326 ರೂ.ಗೆ ತಗ್ಗಿದೆ. ಬೆಳ್ಳಿ ಬೆಲೆ 363 ರೂ.ಕಡಿಮೆ ಆಗಿದ್ದು, ಕೆ.ಜಿ. ದರ 58,366 ರೂ.ಗೆ ಇಳಿಕೆ ಕಂಡಿದೆ.