ನವದೆಹಲಿ: ಭಾರತ ಹಾಗೂ ಚೀನಾ ಸೇನೆಯ ಹಿರಿಯ ಅಧಿಕಾರಿಗಳು ಪೂರ್ವ ಲಡಾಖ್‌ನಲ್ಲಿ ಬುಧವಾರ ಮಾತುಕತೆ ನಡೆಸಿದ್ದಾರೆ. ಈ (ಪೂರ್ವ ಲಡಾಖ್) ಪ್ರಾಂತ್ಯದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮಾತುಕತೆಯ ಉದ್ದೇಶವಾಗಿದೆ.
ಇದು ಮೇಜರ್ ಜನರಲ್‌ಗಳ ಮಟ್ಟದ ವಾಡಿಕೆಯ ಸಂಭಾಷಣೆಯಾಗಿದೆ. ಇಂತಹ ಮಾತುಕತೆಗಳು ತಿಂಗಳಿಗೊಮ್ಮೆ ನಡೆಯುತ್ತಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ದೀರ್ಘ ಸಮಯದಿಂದಲೂ ಇರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾತುಕತೆ ನಡೆದಿದೆ. ಆದರೆ, ಮಾತುಕತೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ಪ್ರದೇಶದಲ್ಲಿ ಉಭಯ ದೇಶಗಳ ಸೇನಾ ಪಡೆಗಳು ಕಳೆದ ಎರಡು ವರ್ಷಗಳಿಂದಲೂ ಠಿಕಾಣಿ ಹೂಡಿವೆ.
ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ದೃಷ್ಟಿಯಿಂದಾಗಿ ಭಾರತವು ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ನಿರಂತರವಾಗಿ ಶಾಂತಿ ಕಾಪಾಡಿಕೊಳ್ಳುತ್ತಾ ಬಂದಿದೆ.
ಗಡಿ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಇದುವರೆಗೆ ಕಮಾಂಡರ್‌ಗಳ ಮಟ್ಟದ 16 ಸುತ್ತಿನ ಮಾತುಕತೆಗಳು ನಡೆದಿವೆ.
ಮಿಲಿಟರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ನಡುವೆ ನಡೆದ ಸರಣಿ ಮಾತುಕತೆಗಳ ಪರಿಣಾಮವಾಗಿ, ಎರಡೂ ದೇಶಗಳು ಕಳೆದ ವರ್ಷ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರ ಪ್ರದೇಶಗಳಿಂದ ತಮ್ಮ ಸೇನೆಗಳನ್ನು ಹಿಂಪಡೆದಿದ್ದವು.