HEALTH TIPS

ಗರ್ಭಕಂಠದ ಕ್ಯಾನ್ಸರ್: ಶೀಘ್ರದಲ್ಲೇ ಲಸಿಕೆ ಬಿಡುಗಡೆ

 

              ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಭಾರತವು ಮೊದಲ ಬಾರಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ತಿಳಿಸಿದೆ.

                   ಲಸಿಕೆಯ ಪ್ರಯೋಗ ವೈಜ್ಞಾನಿಕವಾಗಿ ಪೂರ್ಣಗೊಂಡಿರುವ ಕುರಿತ ಘೋಷಣೆಯ ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡಿದ್ದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳು (ಆರ್‌ ಅಂಡ್ ಡಿ) ಪೂರ್ಣಗೊಂಡಿವೆ. ಲಸಿಕೆಯು ಕೈಗೆಟಕುವ ದರದಲ್ಲಿರುತ್ತದೆ. ಇದು ಜನಸಾಮಾನ್ಯರಿಗೆ ತಲುಪುವಂತೆ ಮಾಡುವುದನ್ನು ಸರ್ಕಾರವು ಖಚಿತಪಡಿಸುತ್ತದೆ' ಎಂದರು.

                'ಕೋವಿಡ್ ಸಾಂಕ್ರಾಮಿಕವು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ಜಾಗೃತಿಯನ್ನು ಮೂಡಿಸಿದೆ. ಆಯುಷ್ಮಾನ್ ಭಾರತದಂಥ ಯೋಜನೆಗಳು ಆರೋಗ್ಯರಕ್ಷಣೆಯ ಮಹತ್ವವನ್ನು ಮನಗಾಣಿಸಿವೆ' ಎಂದು ಹೇಳಿದರು.

                                ಕೈಗೆಟಕುವ ದರದಲ್ಲಿ ಲಭ್ಯ: ಎಸ್‌ಐಐ

               'ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆಯು ₹ 200ರಿಂದ ₹ 400ರ ಒಳಗಿನ ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಶೀಘ್ರವೇ ಲಭ್ಯವಾಗಲಿದೆ' ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಆದಾರ್ ಪೂನಾವಾಲಾ ಹೇಳಿದ್ದಾರೆ.

                   'ಗರ್ಭಕಂಠದ ಕ್ಯಾನ್ಸರ್‌ನ ಇತರ ಲಸಿಕೆಗಳಿಗೆ ಹೋಲಿಸಿದರೆ ಎಚ್‌ಪಿವಿ ಲಸಿಕೆಯ ದರವು ತುಂಬಾ ಕಡಿಮೆ ದರದಲ್ಲಿ ದೊರೆಯಲಿದೆ. ಈ ವರ್ಷಾಂತ್ಯದ ವೇಳೆಗೆ ಲಸಿಕೆ ದೊರೆಯಲಿದೆ' ಎಂದು ಪೂನಾವಾಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

                   'ಆರಂಭದಲ್ಲಿ ಎಚ್‌ಪಿವಿ ಲಸಿಕೆಗಳು ಸರ್ಕಾರದ ಮೂಲಕ ದೊರೆಯಲಿವೆ. ಮುಂದಿನ ಕೆಲ ವರ್ಷಗಳಲ್ಲಿ ಕೆಲವು ಖಾಸಗಿ ಪಾಲುದಾರರೂ ಇದರ ಸಹಭಾಗಿಗಳಾಗಲಿದ್ದಾರೆ' ಎಂದೂ ಅವರು ಮಾಹಿತಿ ನೀಡಿದ್ದಾರೆ.

                  20 ಕೋಟಿ ಲಸಿಕೆ ತಯಾರಿಕೆ: 'ಆರಂಭಿಕ ಹಂತದಲ್ಲಿ 20 ಕೋಟಿ ಲಸಿಕೆಗಳನ್ನು ತಯಾರಿಸುವ ಯೋಜನೆಯಿದ್ದು, ಇವುಗಳನ್ನು ಭಾರತಕ್ಕೇ ಒದಗಿಸಲಾಗುವುದು. ದೇಶದಲ್ಲಿನ ಅಗತ್ಯಗಳನ್ನು  ಪೂರೈಸಿದ ಬಳಿಕವೇ ಇತರ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡಲಾಗುವುದು' ಎಂದು ಅವರು ತಿಳಿಸಿದ್ದಾರೆ.

‌                 ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಜೇಶ್ ಗೋಖಲೆ ಮಾತನಾಡಿ, ಇಡೀ ದೇಶದಲ್ಲಿ ಈ ಲಸಿಕೆಗಾಗಿ ಸುಮಾರು 2 ಸಾವಿರ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಇಂಥ ಸಂಶೋಧನೆಗಳಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವವು ಮುಖ್ಯವಾದುದು. ಈ ಸಹಕಾರವು ಜಗತ್ತಿನಲ್ಲಿ ಉತ್ತಮ ಬದಲಾವಣೆಗಳಿಗೆ ಪೂರಕವಾಗಲಿದೆ' ಎಂದು ಹೇಳಿದ್ದಾರೆ.

        'ಈ ಕ್ಷೇತ್ರದಲ್ಲಿ ಈ ಸಂಶೋಧನೆಯು ಮೊದಲ ಮೆಟ್ಟಿಲಾಗಿದ್ದು, ಇದು ಇನ್ನು ಮುಂದೆಯೂ ಮುಂದುವರಿಯಲಿದೆ. ಸರ್ಕಾರವು ಇಂಥ ನವೀನ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಮ್ಮನ್ನು 'ಆತ್ಮನಿರ್ಭರ'ವನ್ನಾಗಿ ಮಾಡಿದೆ' ಎಂದು ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್‌) ಮಹಾನಿರ್ದೇಶಕರಾದ ಡಾ.ಎನ್.ಕಲೈಸೆಲ್ವಿ ಹೇಳಿದ್ದಾರೆ.

                 'ಎಚ್‌ಪಿವಿ ಲಸಿಕೆಯು ಎಲ್ಲ ವಯಸ್ಸಿನ ಗುಂಪಿನವರಿಗೆ ಸುಮಾರು ಒಂದು ಸಾವಿರ ಪಟ್ಟು ಹೆಚ್ಚಿನ ಪ್ರತಿಕಾಯಗಳನ್ನು ಪ್ರದರ್ಶಿಸಿದೆ' ಎಂದೂ ಸಂಶೋಧನೆಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

                  ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್ 15 ವರ್ಷ ವಯಸ್ಸಿನಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಎರಡನೇ ರೀತಿಯ ಕ್ಯಾನ್ಸರ್ ಆಗಿದೆ.

               ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಜುಲೈನಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಲಸಿಕೆ ತಯಾರಿಸಲು ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಮಾರುಕಟ್ಟೆಯ ಅನುಮತಿಯನ್ನು ನೀಡಿತ್ತು.

                              ಏನಿದು ಗರ್ಭಕಂಠ ಕ್ಯಾನ್ಸರ್?

               ಗರ್ಭಕಂಠದ ದ್ವಾರ ಅಥವಾ ಅದರ ಸುತ್ತಮುತ್ತ ಕಂಡುಬರುವ ತೀವ್ರ ಸ್ವರೂಪದ ಗೆಡ್ಡೆಯೇ ಗರ್ಭಕಂಠದ ಕ್ಯಾನ್ಸರ್. ಹ್ಯೂಮನ್ ಪ್ಯಾಪಿಲೋಮಾ ವೈರಸ್ ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣ.

                    ಗರ್ಭಕಂಠದ ಕ್ಯಾನ್ಸರ್ ಪ್ರಾಥಮಿಕ ಹಂತವು ಸಂಪೂರ್ಣವಾಗಿ ಲಕ್ಷಣರಹಿತವಾಗಿರುತ್ತದೆ. ಯೋನಿಸ್ರಾವ, ಯೋನಿಯಲ್ಲಿ ದುರ್ಮಾಂಸ ಬೆಳೆವಣಿಗೆ ಆಧರಿಸಿ ಈ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದು. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಅಲ್ಪಪ್ರಮಾಣದಲ್ಲಿ ನೋವು ಕಾಣಿಸಿಕೊಳ್ಳುವುದು ಕೂಡಾ ಈ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಈ ಕ್ಯಾನ್ಸರ್‌ನ ಮುಂದುವರಿದ ಭಾಗವಾಗಿ ಹೊಟ್ಟೆ, ಶ್ವಾಸಕೋಶ ಸೇರಿದಂತೆ ದೇಹದ ಇತರ ಭಾಗಗಳಲ್ಲೂ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.

                      ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಕಾರ ದೇಶದಲ್ಲಿ ಪ್ರತಿವರ್ಷ ಶೇ 18.3ರಷ್ಟು (1,23,907) ಗರ್ಭಕಂಠದ ಕ್ಯಾನ್ಸರ್‌ಗಳ ಪ್ರಕರಣಗಳು ವರದಿಯಾಗುತ್ತಿವೆ. 2025ರ ವೇಳೆಗೆ ಈ ಪ್ರಕರಣಗಳ ಸಂಖ್ಯೆ 2.25 ಲಕ್ಷ ದಾಟುವ ಸಾಧ್ಯತೆ ಇದೆ.

         ಬಾಲಕಿಯರಿಗೆ 15 ವರ್ಷ ವಯಸ್ಸು ತಲುಪುವುದರೊಳಗೆ ಎಚ್‌ಪಿವಿ ಲಸಿಕೆಯನ್ನು ಹಾಕಿಸಿದರೆ ಗರ್ಭಕಂಠ ಕ್ಯಾನ್ಸರ್ ಅನ್ನು ತಡೆಯಬಹುದಾಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries