HEALTH TIPS

ಸಕಲ ಕಲೆಗಳಿಗೂ ಮಾತೃ ಸದೃಶವಾಗಿದೆ ಗಮಕ ಕಲೆ: ವಿಶಾಲಾಕ್ಷ ಪುತ್ರಕಳ


          ಕುಂಬಳೆ: ಪ್ರಾಚೀನ ಕಲೆಗಳಿಗೆಲ್ಲ ಮಾತೃಸದೃಶವಾಗಿರುವ ಗಮಕ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ಕಾರ್ಯವನ್ನು ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡ ಘಟಕವು ನಿರಂತರವಾಗಿ ಮಾಡುತ್ತಲೇ ಇದೆ ಎಂದು ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಅಭಿಪ್ರಾಯ ಪಟ್ಟರು.  
       ಆದಿ ಗಮಕಿಗಳಾದ ಕುಶ ಲವರ ಜನ್ಮ ಮಾಸವಾಗಿರುವ ಶ್ರಾವಣ ಮಾಸದಲ್ಲಿ  ಕರ್ನಾಟಕ ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆ ಎಂಬ ಉಭಯ ಸಂಸ್ಥೆಗಳ ಕೇರಳ ಗಡಿನಾಡ ಘಟಕಗಳ ಆಶ್ರಯದಲ್ಲಿ ಕಾಸರಗೋಡಿನ ವಿವಿಧ ಕೇಂದ್ರಗಳಲ್ಲಿ ರಾಮಾಯಣ ಕಾವ್ಯದ ವಾಚನ-ವ್ಯಾಖ್ಯಾನಗಳ ಸರಣಿ ಕಾರ್ಯಕ್ರಮಗಳ ಈ ವರ್ಷದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ ಶಿಕ್ಷಣತಜ್ಞ, ಸಾಹಿತಿ ವಿ.ಬಿ.ಕುಳಮರ್ವ ಅವರ "ಶ್ರೀನಿಧಿ" ಮನೆಯಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು.
           ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡಿನ 'ಸೀತಮ್ಮ ಪುರುಷ ಕನ್ನಡ ಭವನ ಮತ್ತು ಗ್ರಂಥಾಲಯ'ದ ಸ್ಥಾಪಕಾಧ್ಯಕ್ಷ  ವಾಮನ ರಾವ್ ಬೇಕಲ್ ಅವರು "ವಿ.ಬಿ.ಕುಳಮರ್ವ ಅವರ ಮನೆಯೇ ಒಂದು ಸಾಹಿತ್ಯ ಕೇಂದ್ರ. ಇಲ್ಲಿ ಜರಗುವ ಯಾವುದೇ ಕಾರ್ಯಕ್ರಮವಾದರೂ ಸಮಾಜಕ್ಕೆ ಮಾದರಿಯಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.



      ಸಮಾರಂಭದ ಪ್ರಾಯೋಜಕರಾದ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
           ಈ ಸಂದರ್ಭದಲ್ಲಿ ಜೈಮಿನಿ ಭಾರತ ಮಹಾಕಾವ್ಯದಿಂದಾಯ್ದ "ಸೀತಾ ಪರಿತ್ಯಾಗ ಮತ್ತು ಕುಶಲವರ ಜನನ" ಎಂಬ ಭಾಗವನ್ನು ಮಾದರಿ ಕೃಷಿಕ ಗಮಕಿ  ಗೋಪಾಲಕೃಷ್ಣ ಭಟ್ ಕೊಚ್ಚಿ ಅವರು ಸುಶ್ರಾವ್ಯವಾಗಿ ವಾಚನ ಗೈದರು. ನಿವೃತ್ತ ಶಿಕ್ಷಕ ,ಸಾಹಿತಿ ಶ್ರೀಹರಿ ಭಟ್ ಪೆಲ್ತಾಜೆ  ಅವರು ಮನೋಜ್ಞವಾಗಿ ವ್ಯಾಖ್ಯಾನಗೈದರು.
         ಸಿರಿಗನ್ನಡ ವೇದಿಕೆಯ ಅಧ್ಯಕ್ಷ ವಿ.ಬಿ.ಕುಳಮರ್ವ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಗಮಕ ಶ್ರಾವಣ ಸರಣಿ ಕಾರ್ಯಕ್ರಮದ ಔಚಿತ್ಯವನ್ನು ವಿಶದಪಡಿಸಿದರು. ಗಮಕ ಪರಿಷತ್ತಿನ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಧ್ಯಕ್ಷತೆ ವಹಿಸಿ ಮಾತನಾqಡಿ  ಅಕ್ಟೋಬರ್ ತಿಂಗಳ 8 ಮತ್ತು 9 ರಂದು ಕಾಸರಗೋಡಿನ ಹವ್ಯಕ ಸಭಾಭವನದಲ್ಲಿ ಜರಗಲಿರುವ ಮಹತ್ವಪೂರ್ಣವಾದ "ಕಲೋಪಾಸನಾ ಸಮ್ಮೇಳನದ" ಕುರಿತು ಮಾಹಿತಿಯನ್ನಿತ್ತರು.
      ಕುಮಾರಿ ಶ್ರದ್ಧಾ ಭಟ್ ನಾಯರ್ಪಳ್ಳ ಅವರು ಶ್ರೀ ವಿ.ಬಿ.ಕುಳಮರ್ವ ವಿರಚಿತ ಗಮಕ ಗೀತೆಯನ್ನು ಹಾಡುವ ಮೂಲಕ ಪ್ರಾರ್ಥನೆ ಗೈದರು. ಗಮಕ ಕಲಾ ಪರಿಷತ್ತಿನ ಜತೆ ಕಾರ್ಯದರ್ಶಿ  ಪಿ.ವಿ. ಶಿವರಾಮ ಚಿತ್ತಾರಿ ಅವರು ವಂದಿಸಿದರು. ಶಶಾಂಕ ಕುಳಮರ್ವ ನಿರೂಪಿಸಿದರು. ಈ ಸಂದರ್ಭ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಬಿ.ಎ. ಹಾಗೂ ಎಂ.ಎ.ತರಗತಿಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಬಹುಮುಖ ಪ್ರತಿಭಾವಂತೆ "ಗಮಕ ಕಲಾಧರೆ" ಕುಮಾರಿ ಶ್ರದ್ಧಾ ಭಟ್ ನಾಯರ್ಪಳ್ಳ ಅವರನ್ನು ವಿ.ಬಿ.ಕುಳಮರ್ವ ದಂಪತಿ ಚಿನ್ನದ ಬೆಂಡೋಲೆಗಳನ್ನಿತ್ತು ಗೌರವಿಸಿ ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries