ರಾಯ್‌ಪುರ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಂಶ ರಾಜಕಾರಣದ ಕುರಿತಾದ ಹೇಳಿಕೆಗೆ ತಿರುಗೇಟು ನೀಡಿರುವ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಕೇಸರಿ ಪಕ್ಷದಲ್ಲೇ ಸಾಕಷ್ಚು 'ಪರಿವಾರವಾದ' (ಕುಟುಂಬ ರಾಜಕಾರಣ)ದ ಹಲವು ಉದಾಹರಣೆಗಳು ಇವೆ ಎಂದಿದ್ದಾರೆ.
ರಾಯ್‌ಪುರದ ಪೊಲೀಸ್ ಲೈನ್ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕುಟುಂಬವು ದೇಶಕ್ಕಾಗಿ ತ್ಯಾಗಮಾಡಿದೆ ಎಂದರು.
ಒಂದು ದಿನದ ಹಿಂದಷ್ಟೇ ರಾಜ್ಯಕ್ಕೆ ಆಗಮಿಸಿದ್ದ ನಡ್ಡಾ ಅವರು ಕಾಂಗ್ರೆಸ್ ಸೇರಿದಂತೆ ಇತರ ಹಲವು ಪ್ರಾದೇಶಿಕ ಪಕ್ಷಗಳಲ್ಲಿ ವಂಶ ರಾಜಕಾರಣವಿರುವ ಬಗ್ಗೆ ಟೀಕಿಸಿದ್ದರು.
'ಪರಿವಾರವಾದದ ಬಗ್ಗೆ ನಡ್ಡಾ ಅವರು ಹೇಳುತ್ತಿರುವುದು ಖಂಡಿತ ಸತ್ಯ. ಬಿಜೆಪಿ ನಾಯಕ ಬಲಿರಾಮ ಕಶ್ಯಪ್ ಅವರ ಮಕ್ಕಳಾದ ದಿನೇಶ್ ಕಶ್ಯಪ್ (ಮಾಜಿ ಸಂಸದ) ಮತ್ತು ಕೇದಾರ್ ಕಶ್ಯಪ್ (ಮಾಜಿ ಶಾಸಕ ಮತ್ತು ಸಚಿವ), ರಮಣ್ ಸಿಂಗ್ ಮತ್ತು ಅವರ ಮಗ, ಮಾಜಿ ಸಂಸದ ಅಭಿಷೇಕ್ ಸಿಂಗ್ - ಇವೆಲ್ಲ ರಾಜ್ಯದಲ್ಲಿರುವ ಕುಟುಂಬ ರಾಜಕಾರಣದ ಕೆಲವು ಉದಾಹರಣೆಗಳು' ಎಂದು ಬಘೇಲ್ ತಿರುಗೇಟು ನೀಡಿದರು.
ರಾಜನಾಥ ಸಿಂಗ್ ಮತ್ತು ಅವರ ಮಗ, ಅಮಿತ್ ಶಾ ಮತ್ತು ಅವರ ಮಗ, ವಸುಧೇಂದ್ರ ರಾಜೆ ಸಿಂಧಿಯಾ ಮತ್ತು ಅವರ ಮಗ, ಅವರ ಸೋದರಳಿಯ - ಬಿಜೆಪಿಯಲ್ಲೇ ಸಾಕಷ್ಟು ವಂಶ ರಾಜಕಾರಣ ಇದೆ ಎಂದು ವಾಗ್ದಾಳಿ ನಡೆಸಿದರು.
ನಡ್ಡಾ ಅವರು ಯಾವ ಕುಟುಂಬವನ್ನು ಉದ್ದೇಶಿಸಿ ದಾಳಿ ನಡೆಸುತ್ತಿದ್ದಾರೆಯೋ ಆ ಕುಟುಂಬವು ದೇಶಕ್ಕಾಗಿ ತ್ಯಾಗ ಮಾಡಿದೆ. ರಾಷ್ಟ್ರವನ್ನು ಕಟ್ಟುವ ಕಾಯಕದಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ ಎಂದರು.