ಕೊಚ್ಚಿ: ಕೆಲ ಜನರು ಮಾನವೀಯತೆಯನ್ನು ಸಂಪೂರ್ಣ ಮರೆತಿದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಸಾಕ್ಷಿಯಾಗಿದೆ. ಮೊದಲೇ ಜನ್ಮ ನೀಡುವುದೆಂದರೆ ಅದೊಂದು ನೋವಿನ ಪ್ರಕ್ರಿಯೆ. ಇಂತಹ ಕಠಿಣ ಸಂದರ್ಭದಲ್ಲಿಯೂ ದೌರ್ಜನ್ಯ ಎಸಗುತ್ತಾರೆಂದರೆ ನಿಜವಾಗಿಯೂ ಅವರೆಂಥಾ ಕ್ರೂರಿ ಇರಬೇಕು ನೀವೇ ಯೋಚಿಸಿ.
ವಿವರಣೆಗೆ ಬರುವುದಾದರೆ, ಬೀದಿ ನಾಯಿಯೊಂದು ಮರಿಗಳಿಗೆ ಜನ್ಮ ನೀಡುವಾಗಲೇ ಅದಕ್ಕೆ ಥಳಿಸಿರುವ ಅಮಾನವೀಯ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ಚಂದಕುನ್ನು ಎಂಬಲ್ಲಿ ನಡೆದಿದೆ.
ನಾಯಿಯು ಮೂರನೇ ಮರಿಗೆ ಜನ್ಮ ನೀಡುವಾಗ ದುಷ್ಟನೊರ್ವ ದೊಣ್ಣೆಯಿಂದ ನಾಯಿಯ ಬೆನ್ನಿಗೆ ಬಾರಿಸಿದ್ದಾನೆ. ಮರಿಯು ಅರ್ಧ ಹೊರ ಬಂದಿರುವಾಗಲೇ ತಾಯಿ ನಾಯಿಯು ನೋವಿನಿಂದ ಓಡಿ ಹೋಗಿದೆ. ಈ ಘಟನೆ ಮಂಗಳವಾರ (ಸೆ.20) ನಡೆದಿದೆ.
ಸೆ.21 ಬೆಳಗ್ಗೆ ಅರ್ಧ ಜನಿಸಿದ ಮಗುವಿನೊಂದಿಗೆ ನಾಯಿ ಅಲೆದಾಡುವುದನ್ನು ಸಾಮಾಜಿಕ ಕಾರ್ಯಕರ್ತ ಕೆ.ಪಿ.ಮುಜೀಬ್ ರೆಹಮಾನ್ ಅವರು ಗಮನಿಸಿದ್ದಾರೆ. ತಕ್ಷಣ ತುರ್ತು ರಕ್ಷಣಾ ಪಡೆಯ ಸಹಾಯದಿಂದ ನಾಯಿಯನ್ನು ಹಿಡಿದು ಪಶು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಸಣ್ಣ ಆಪರೇಷನ್ ಮಾಡಿ ಅರ್ಧ ಜನನ ಸೇರಿದಂತೆ ಎರಡು ನಾಯಿಮರಿಗಳ ದೇಹಗಳನ್ನು ಹೊರತೆಗೆದಿದ್ದಾರೆ.
ಹೊರಗೆ ತೆಗೆದ ಎರಡು ಮರಿಗಳೂ ಸತ್ತು ಹೋಗಿದ್ದವು. ಮೊದಲೇ ಜನಿಸಿದ ಎರಡು ನಾಯಿಮರಿಗಳು ರಸ್ತೆಬದಿಯಲ್ಲಿ ಪತ್ತೆಯಾಗಿದ್ದು, ಈಗ ತಾಯಿಯೊಂದಿಗೆ ಇವೆ. ಆದರೆ, ರಸ್ತೆ ಬದಿಯ ಚರಂಡಿಯನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರು ಬಂದಾಗ ತಾಯಿ ನಾಯಿ, ಮರಿಗಳನ್ನು ಅಲ್ಲಿಯೇ ಬಿಟ್ಟು ಹೆದರಿ ಓಡಿ ಹೋಗಿದೆ. ಸದ್ಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ಮುಜೀಬ್, ಮರಿಗಳಿಗೆ ಹಾಲು, ಬಿಸ್ಕೆಟ್ ನೀಡುತ್ತಿದ್ದಾರೆ. ತಾಯಿ ನಾಯಿ ಮತ್ತೆ ಹಿಂದಿರುಗಬಹುದು ಎಂಬ ಭರವಸೆ ಇದೆ. ಯಾವುದೋ ಮನೆಯ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡುವ ವೇಳೆ ತಾಯಿ ನಾಯಿಗೆ ಹೊಡೆದಿರಬಹುದು ಎಂದು ನಂಬಲಾಗಿದೆ.