ನವದೆಹಲಿ : ದೇಶದಲ್ಲಿ ಎಚ್‌ಐವಿ ಪೀಡಿತರ ಚಿಕಿತ್ಸೆಗಾಗಿ ಬಳಸಲಾಗುವ ಆಯಂಟಿರೆಟ್ರೊವೈರಲ್ ಔಷಧಿಯ ಕೊರತೆ ಇದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇಂಡಿಯನ್ ನೆಟ್ವರ್ಕ್ ಫಾರ್ ಪೀಪಲ್ ಲಿವಿಂಗ್ ವಿಥ್ ಎಚ್‌ಐವಿ/ಏಡ್ಸ್ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಇತರರಿಗೆ ಸೂಚಿಸಿದೆ.
'ದೇಶದಲ್ಲಿ ಆಯಂಟಿರೆಟ್ರೊವೈರಲ್ ಔಷಧಿಯ ದಾಸ್ತಾನು ಇಲ್ಲ ಎಂದು ಅರ್ಜಿದಾರರು ದೂರಿದ್ದಾರೆ. 2021-22ನೇ ಸಾಲಿನ ಟೆಂಡರ್ ಅನ್ನು 2021ರ ಆಗಸ್ಟ್‌ನಲ್ಲಿ ಕರೆಯಬೇಕಾಗಿತ್ತು. ಆದರೆ ಅದನ್ನು 2021ರ ಡಿಸೆಂಬರ್‌ನಲ್ಲಿ ಕರೆಯಲಾಯಿತು. ಅದು ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಿ' ಎಂದು ನ್ಯಾಯಪೀಠವು ನಿರ್ದೇಶಿಸಿತು.