ರಾಯಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗಲೇ ಕೋಮು ಧ್ರುವೀಕರಣ ಆರಂಭವಾಗಿದೆ. ಶ್ರೀರಾಮ ಅಥವಾ ಕೃಷ್ಣ ಕೇವಲ ಕೇಸರಿ ಪಕ್ಷಕ್ಕೆ ಸೇರಿದವರಾಗಿದ್ದರೆ ಪುರಾವೆ ತೋರಿಸುವಂತೆ ಆಡಳಿತಾರೂಢ ಕಾಂಗ್ರೆಸ್ ಬಿಜೆಪಿಗೆ ಲೀಗಲ್ ನೋಟಿಸ್ ನೀಡಿದೆ.
ಹೊಸದಾಗಿ ನೇಮಕಗೊಂಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ, ಬಿಲಾಸ್‌ಪುರ ಸಂಸದ ಅರುಣ್ ಸಾವೊ ಅವರು ರಾಮ ಮತ್ತು ಕೃಷ್ಣ 'ಎಲ್ಲರಿಗೂ ಸೇರಿದವರು ಆದರೆ, ಕಾಂಗ್ರೆಸ್‌ಗೆ ಅಲ್ಲ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಈ ಹಿಂದೆ ಕಾಂಗ್ರೆಸ್, ರಾಮನಿಗಾಗಿ ಏನು ಹೇಳಿದೆ ಮತ್ತು ಮಾಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಯಾವುದೇ ಐತಿಹಾಸಿಕ ಪುರಾವೆಗಳನ್ನು ಉಲ್ಲೇಖಿಸದೆ ಭಗವಾನ್ ರಾಮನ ಅಸ್ತಿತ್ವವನ್ನು ವಿವಾದಕ್ಕೆ ತಳ್ಳಿದ್ದಾರೆ' ಎಂದು ಸಾವೊ ಆರೋಪಿಸಿದ್ದಾರೆ.
ಪ್ರತಿಯೊಬ್ಬರ ಹೃದಯದಲ್ಲಿ ಆಳವಾಗಿ ಹುದುಗಿರುವ ರಾಮ ಅಥವಾ ಕೃಷ್ಣನ ಮೇಲೆ ಬಿಜೆಪಿಗೆ ಮಾತ್ರ ಹಕ್ಕು ಇಲ್ಲ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಹೇಳಿದ ಬಳಿಕ ಬಿಜೆಪಿ ನಾಯಕ ಹೇಳಿಕೆ ನೀಡಿದ್ದರು.
'ರಾಮ ಅಥವಾ ಕೃಷ್ಣ ಏಕೆ ಕಾಂಗ್ರೆಸ್‌ಗೆ ಇರಬಾರದು ಎಂಬುದನ್ನು ಸಮರ್ಥಿಸುವಂತೆ ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ. ನಾನು ಕಾಂಗ್ರೆಸ್ಸಿಗ ಮತ್ತು ಭಕ್ತನಾಗಿ ಇಬ್ಬರಿಗೂ ಪೂಜೆ ಸಲ್ಲಿಸುತ್ತೇನೆ. ಯಾವ ದಾಖಲೆಯಲ್ಲಿ ಶ್ರೀರಾಮ ಅಥವಾ ಶ್ರೀಕೃಷ್ಣ ಬಿಜೆಪಿಗೆ ಮಾತ್ರ ಎಂದು ಬರೆಯಲಾಗಿದೆ. ನಮ್ಮ ಲೀಗಲ್ ನೋಟಿಸ್‌ಗೆ ಬಿಜೆಪಿ ಪ್ರತಿಕ್ರಿಯಿಸದಿದ್ದರೆ ಮತ್ತು 15 ದಿನಗಳಲ್ಲಿ ಕ್ಷಮೆಯಾಚಿಸದಿದ್ದರೆ, ಕಾಂಗ್ರೆಸ್‌ನಿಂದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು' ಎಂದು ಕಾಂಗ್ರೆಸ್‌ನ ಉಸ್ತುವಾರಿ, ವಕೀಲ ದೇವಾ ದೇವಾಂಗನ್ ಹೇಳಿದರು.
ಆದರೆ, ಇಂತಹ ಲೀಗಲ್ ನೋಟೀಸ್ ನೀಡುವುದರಿಂದ 'ಮುಳುಗುತ್ತಿರುವ ಹಡಗು' ಆಗಿ ಉಳಿದಿರುವ ಕಾಂಗ್ರೆಸ್‌ಗೆ ಯಾವುದೇ ವಿರಾಮ ನೀಡುವುದಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
'ಕಾಂಗ್ರೆಸ್ ತನ್ನನ್ನು ರಾಜಕೀಯವಾಗಿ ಪ್ರಸ್ತುತಪಡಿಸಲು ಹತಾಶವಾಗಿ ಈ ರೀತಿ ಪ್ರಯತ್ನಿಸುತ್ತಿದೆ. ಅಂತಹ ನೋಟಿಸ್‌ಗೆ ನಾವು ಸೂಕ್ತ ವಿಧಾನದ ಮೂಲಕವೇ ಉತ್ತರ ನೀಡುತ್ತೇವೆ' ಎಂದು ಬಿಜೆಪಿ ಕಾನೂನು ಘಟಕದ ನರೇಶ್ ಗುಪ್ತಾ ಹೇಳಿದ್ದಾರೆ.
ಛತ್ತೀಸಗಢದ ಭೂಪೇಶ್ ಸರ್ಕಾರವು ಧಾರ್ಮಿಕ ವಿಚಾರಗಳ ಮೇಲೆ ರಾಜಕೀಯ ಲಾಭ ಪಡೆಯಲು ರಾಜಕೀಯ ಪ್ರತಿಸ್ಪರ್ಧಿ ಬಿಜೆಪಿಗೆ ಅವಕಾಶ ನೀಡದೆ ಸ್ಥಿರವಾಗಿದೆ ಎಂದು ರಾಜ್ಯ ರಾಜಕೀಯವನ್ನು ಹತ್ತಿರದಿಂದ ಕಂಡ ತಜ್ಞರು ಉಲ್ಲೇಖಿಸುತ್ತಾರೆ.