ಜಿನೆವಾ: ಉಕ್ರೇನ್ನಲ್ಲಿ ನಾಗರಿಕರ ಪ್ರದೇಶದಲ್ಲಿ ರಶ್ಯದ ಬಾಂಬ್ ದಾಳಿ, ಹಲವಾರು ಮರಣದಂಡನೆಗಳು, ಚಿತ್ರಹಿಂಸೆ ಮತ್ತು ಭಯಾನಕ ಲೈಂಗಿಕ ಹಿಂಸೆಯ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದ್ದು ಉಕ್ರೇನ್ ಸಂಘರ್ಷದಲ್ಲಿ ರಶ್ಯದಿಂದ ಯುದ್ಧಾಪರಾಧ ನಡೆದಿರುವುದು ಸ್ಪಷ್ಟವಾಗಿದೆ ಎಂದು ವಿಶ್ವಸಂಸ್ಥೆ ತನಿಖಾಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ತನಿಖಾ ಆಯೋಗ ಸಂಗ್ರಹಿಸಿರುವ ಪುರಾವೆಗಳ ಆಧಾರದಲ್ಲಿ, ಉಕ್ರೇನ್ನಲ್ಲಿ ಯುದ್ಧಾಪರಾಧ ನಡೆದಿದೆ ಎಂದು ತೀರ್ಮಾನಿಸಲಾಗಿದೆ ಎಂದು ತನಿಖಾ ತಂಡದ ಮುಖ್ಯಸ್ಥ ಎರಿಕ್ ಮೋಸ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಗೆ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧದಲ್ಲಿ ಅಪರಾಧ ನಡೆದಿರುವ ವರದಿಯ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆಯ ಅತ್ಯುನ್ನತ ತನಿಖಾ ಸಂಸ್ಥೆ ಕಮಿಷನ್ ಆಫ್ ಎನ್ಕ್ವಯರಿ(ಸಿಒಐ) ಮೇ ತಿಂಗಳಿನಲ್ಲಿ ವಿಚಾರಣಾ ಆಯೋಗವನ್ನು ನೇಮಿಸಿತ್ತು. ಮೂವರು ಸ್ವತಂತ್ರ ತಜ್ಞರನ್ನು ಒಳಗೊಂಡ ತಂಡವು ಉಕ್ರೇನ್ನ ಕೀವ್, ಚೆರ್ನಿಹಿವ್, ಖಾರ್ಕಿವ್ ಮತ್ತು ಸುಮಿ ಪ್ರದೇಶಗಳಲ್ಲಿ ನಡೆಸಿದ ತನಿಖೆಯ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡಿದ್ದು ಮುಂದಿನ ಹಂತದಲ್ಲಿ ವಿಸ್ತತ ವರದಿ ಸಲ್ಲಿಸುವುದಾಗಿ ಹೇಳಿದೆ.
ಅಧಿಕ ಜನಸಂಖ್ಯೆಯ ಪ್ರದೇಶದಲ್ಲಿ ರಶ್ಯಾ ಒಕ್ಕೂಟ ವ್ಯಾಪಕ ಪರಿಣಾಮಗಳೊಂದಿಗೆ ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದು ಇದರಿಂದ ನಾಗರಿಕರಿಗೆ ಅಪಾರ ಹಾನಿ ಮತ್ತು ಸಂಕಷ್ಟಕ್ಕೆ ಕಾರಣವಾಗಿದೆ . ಜನನಿಬಿಡ ಪ್ರದೇಶದಲ್ಲಿ ಸ್ಫೋಟಕ ಬಳಕೆ ಸಹಿತ ಹಲವು ದಾಳಿಗಳ ಬಗ್ಗೆ ನಡೆಸಿದ ತನಿಖೆಯಲ್ಲಿ ದಾಳಿಗಳನ್ನು ನಾಗರಿಕರು ಮತ್ತು ಹೋರಾಟಗಾರರ ಮಧ್ಯೆ ವ್ಯತ್ಯಾಸವಿಲ್ಲದೆ ನಡೆಸಲಾಗಿದೆ ಎಂದು ಎರಿಕ್ ಮೋಸ್ ಹೇಳಿದ್ದಾರೆ. ತಂಡ ಭೇಟಿ ನೀಡಿದ ಪ್ರದೇಶಗಳಲ್ಲಿ ಪತ್ತೆಯಾದ ಮೃತದೇಹಗಳ ಮೇಲೆ ಗಾಯ, ಬೆನ್ನಿನ ಹಿಂದೆ ಕೈಗಳನ್ನು ಕಟ್ಟಿ ಹಾಕಿರುವುದು, ತಲೆಯಲ್ಲಿ ಗುಂಡೇಟಿನ ಗಾಯ, ಗಂಟಲು ಸೀಳಿರುವುದು ಕಂಡುಬಂದಿದೆ.
16 ನಗರ ಹಾಗೂ ಪ್ರದೇಶಗಳಲ್ಲಿ ಇಂತಹ ಹತ್ಯೆಯ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ ಮತ್ತು ಇನ್ನೂ ಹಲವು ಪ್ರಕರಣಗಳ ಬಗ್ಗೆ ನಂಬಲರ್ಹ ಆರೋಪಗಳನ್ನು ಸ್ವೀಕರಿಸಿದ್ದು ಅದನ್ನು ದಾಖಲಿಸಲು ಬಯಸುತ್ತದೆ. ಕಾನೂನು ಬಾಹಿರ ಬಂಧನದ ಸಮಯದಲ್ಲಿ ನಡೆಸಲಾದ ದೌರ್ಜನ್ಯ ಮತ್ತು ಚಿತ್ರಹಿಂಸೆಯ ಬಗ್ಗೆ ನಿರಂತರ ಮಾಹಿತಿಯನ್ನು ತನಿಖಾಧಿಕಾರಿಗಳು ಪಡೆಯುತ್ತಿದ್ದಾರೆ. ತಮ್ಮನ್ನು ರಶ್ಯಕ್ಕೆ ಸ್ಥಳಾಂತರಿಸಿ ಹಲವು ವಾರ ಬಂಧನಲ್ಲಿರಿಸಿರುವುದಾಗಿ ಹಲವರು ಹೇಳಿದ್ದಾರೆ. ಹೀಗೆ ಸ್ಥಳಾಂತರಗೊಂಡವರಲ್ಲಿ ಕೆಲವರು ನಾಪತ್ತೆಯಾಗಿರುವುದಾಗಿ ಮಾಹಿತಿ ಇದೆ. ನಗ್ನಗೊಳಿಸುವುದು, ಹೊಡೆಯುವುದು, ವಿದ್ಯುತ್ ಆಘಾತ ಹಾಗೂ ಇತರ ರೀತಿಯ ದೌರ್ಜನ್ಯ ನಡೆದಿರುವುದಾಗಿ ದೂರು ಬಂದಿದೆ. ತಂಡವು ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಪ್ರಕರಣಗಳನ್ನೂ ದಾಖಲಿಸಿದೆ. ಕೆಲವು ಸಂದರ್ಭಗಳಲ್ಲಿ ಅಪರಾಧವನ್ನು ವೀಕ್ಷಿಸುವಂತೆ ಸಂಬಂಧಿಕರನ್ನು ಬಲವಂತಪಡಿಸಿದ ದೂರುಗಳೂ ಇವೆ. ನಾವು ತನಿಖೆ ನಡೆಸಿದ ಪ್ರಕರಣಗಳಲ್ಲಿ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಬಲಿಪಶುಗಳ ವಯಸ್ಸು 4ರಿಂದ 82 ವರ್ಷಗಳು. ಮಕ್ಕಳನ್ನು ಅಕ್ರಮ ಬಂಧನಲ್ಲಿರಿಸಿ ಚಿತ್ರಹಿಂಸೆ, ಅತ್ಯಾಚಾರ ಸೇರಿದಂತೆ ವ್ಯಾಪಕ ಶ್ರೇಣಿಯ ಅಪರಾಧವನ್ನು ನಡೆಸಿರುವುದನ್ನು ದಾಖಲಿಸಲಾಗಿದೆ ಎಂದು ಎರಿಕ್ ಮೋಸ್ ಹೇಳಿದ್ದಾರೆ.
ಉಕ್ರೇನ್ ಯೋಧರ ವಿರುದ್ಧವೂ ದೂರು
ಉಕ್ರೇನ್ ಯೋಧರು ರಶ್ಯ ಯೋಧರ ವಿರುದ್ಧ ದೌರ್ಜನ್ಯ ಮತ್ತು ಚಿತ್ರಹಿಂಸೆ ನಡೆಸಿರುವ ಎರಡು ಪ್ರಕರಣಗಳ ಕುರಿತ ದೂರಿನ ಬಗ್ಗೆಯೂ ತನಿಖಾ ಆಯೋಗ ಪರಿಶೀಲಿಸಿದೆ. ಇಂತಹ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಈ ಬಗ್ಗೆಯೂ ಆಯೋಗ ಗಮನ ಹರಿಸುತ್ತಿದೆ ಎಂದು ಎರಿಕ್ ಮೋಸ್ ಹೇಳಿದ್ದಾರೆ.