ಭೋಪಾಲ್ : ಆಫ್ರಿಕಾದಿಂದ ಚೀತಾಗಳನ್ನು ತರುತ್ತಿರುವ ಕಾರಣ ಇಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತಲಿನ 1,000ಕ್ಕೂ ಅಧಿಕ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ವೇಗವಾಗಿ ಓಡುವ ಪ್ರಾಣಿಯನ್ನು ಭಾರತದಲ್ಲಿ ಮತ್ತೆ ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಆಫ್ರಿಕಾದಿಂದ ಮುಂದಿನವಾರ ಚೀತಾಗಳನ್ನು ಇಲ್ಲಿಗೆ ತರಲಾಗುತ್ತಿದೆ. ಹೀಗಾಗಿ ಇಲ್ಲಿನ ವನ್ಯಜೀವಿಗಳನ್ನು ರೇಬಿಸ್‌ನಿಂದ ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಚಾಲನೆ: ಆಫ್ರಿಕಾದಿಂದ ತಂದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದ ಒಳಗೆ ಬಿಡುವ ಮೂಲಕ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆ.17ರಂದು ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆ.17 ಪ್ರಧಾನಿ ಮೋದಿ ಅವರ ಜನ್ಮದಿನ ಎನ್ನುವುದು ವಿಶೇಷ.
ನಮೀಬಿಯಾದಿಂದ 5 ಗಂಡು, 3 ಹೆಣ್ಣು ಚೀತಾಗಳು ಸೆ.17ರಂದು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪುವ ನಿರೀಕ್ಷೆ ಇದೆ. ಇದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಚೀತಾಗಳನ್ನು ಮರು ಪರಿಚಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಮುಂಚೆ ತಿಳಿಸಿದ್ದರು.
ಭಾರತದ ಕೊನೆಯ ಚೀತಾ 1947ರಲ್ಲಿ ಮೃತಪಟ್ಟಿತ್ತು. 1952ರಲ್ಲಿ ಈ ವನ್ಯಜೀವಿಯನ್ನು ವಿನಾಶಗೊಂಡ ಪ್ರಾಣಿಗಳ ಗುಂಪಿಗೆ ಸೇರಿಸಲಾಗಿದೆ.