ಕಾಸರಗೋಡು: ಭಯೋತ್ಪಾದನಾ ಚಟುವಟಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ)ದ ಕಾಸರಗೋಡು ಹಾಗೂ ತೃಕ್ಕರಿಪುರದ ಕಚೇರಿಗಳಿಗೆ ಎನ್‍ಐಎ ಅಧಿಕಾರಿಗಳು ಬೀಗ ಜಡಿದು ಮೊಹರು ಹಾಕಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸವಾಗತ್ ರಣವೀರ್‍ಚಂದ್ ಅವರ ನಿರ್ದೇಶಾನುಸಾರ ಕಚೇರಿಗಳಿಗೆ ಬೀಗ ಹಾಕಲಾಗಿದೆ. ನಾಯಮರ್‍ಮೂಲೆ ಸನಿಹದ ಪೆರುಂಬಳದಲ್ಲಿ ಚಂದ್ರಗಿರಿ ಚಾರಿಟೇಬಲ್ ಸೊಸೈಟಿ ಹೆಸರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿ ಕಾರ್ಯಾಚರಿಸುತ್ತಿತ್ತು. ಕಾಸರಗೋಡು ಡಿವೈಎಸ್ಪಿ ಪಿ.ಪಿ ಮನೋಜ್‍ಮ ಗುಪ್ತಚರ ದಳ ಡಿವೈಎಸ್‍ಪಿ ಡಾ. ನಾಲಕೃಷ್ಣನ್, ಪಿ.ಕೆ ಸುಧಾಕರನ್, ವಿದ್ಯಾನಗರ ಠಾಣೆ ಸಿ.ಐ ಅನೂಪ್ ನೇತೃತ್ವದ ಪೊಲೀಸರೊಂದಿಗೆ ಎನ್‍ಐಎ ಅಧಿಕಾರಿ ಸಜೀವ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಶುಕ್ರವಾರ ಕಚೇರಿಗೆ ಆಗಮಿಸಿ ಕಚೇರಿ ತಪಾಸಣೆ ನಡೆಸಿ, ಬೀಗ ಜಡಿದು ಮೊಹರು ಹಾಕಿದ ನಂತರ ನೋಟೀಸು ಲಗತ್ತಿಸಿದೆ.
ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಕ್ಕರಿಪುರ ಮೊಟ್ಟಮ್ಮಲ್‍ನಲ್ಲಿರುವ ಪಿಎಫ್‍ಐ ಕಚೇರಿಗೂ ಅಧಿಕಾರಿಗಳು ಬೀಗ ಜಡಿದು ಮೊಹರು ಹಾಕಿದರು. ದೇಶಾದ್ಯಂತ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಿ ಕೆಲವು ದಿವಸಗಳಾದರೂ, ಈ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕೇರಳ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂಬ ದೂರು ವ್ಯಾಪಕಗೊಂಡಿತ್ತು.