ನವದೆಹಲಿ:ತನ್ನ ಕೋರಿಕೆಯ ಮೇರೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ-ಲೆನಿನ್ವಾದಿ) ತನ್ನನ್ನು ಎಲ್ಲ ಪಕ್ಷದ ಹುದ್ದೆಗಳು ಮತ್ತು ಹೊಣೆಗಾರಿಕೆಗಳಿಂದ ಬಿಡುಗಡೆಗೊಳಿಸಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್ ತಿಳಿಸಿದ್ದಾರೆ.
ತಾನು ಪಕ್ಷದ ಸದಸ್ಯೆಯಾಗಿ ಮುಂದುವರಿಯುವುದಾಗಿ ಗುರುವಾರ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಅವರು ಬರೆದುಕೊಂಡಿದ್ದಾರೆ.
ಸಿಪಿಐ (ಎಂ-ಎಲ್)ನ ಪಾಲಿಟ್ ಬ್ಯೂರೋದ ಸದಸ್ಯೆಯಾಗಿದ್ದ ಕೃಷ್ಣನ್ ಎರಡು ದಶಕಗಳಿಗೂ ಅಧಿಕ ಸಮಯ ಪಕ್ಷದ ಕೇಂದ್ರೀಯ ಸಮಿತಿಯ ಸದಸ್ಯೆಯಾಗಿದ್ದರು.
ತಾನು 'ಕೆಲವು ತೊಂದರೆದಾಯಕ ರಾಜಕೀಯ ಪ್ರಶ್ನೆಗಳನ್ನು' ಎದುರಿಸಬೇಕಿದೆ ಮತ್ತು ಸಿಪಿಐ (ಎಂ-ಎಲ್) ನಾಯಕಿಯಾಗಿ ಅದು ಸಾಧ್ಯವಿಲ್ಲ,ಹೀಗಾಗಿ ತನ್ನನ್ನು ಹುದ್ದೆಗಳಿಂದ ಬಿಡುಗಡೆಗೊಳಿಸುವಂತೆ ತಾನು ಪಕ್ಷವನ್ನು ಕೋರಿಕೊಂಡಿದ್ದೆ ಎಂದು ಕೃಷ್ಣನ್ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಸರ್ವಾಧಿಕಾರ ಮತ್ತು ಬಹುಸಂಖ್ಯಾತ ರಾಜಕೀಯದ ಹೆಚ್ಚುತ್ತಿರುವ ರೂಪಗಳ ವಿರುದ್ಧ ಉದಾರವಾದಿ ಪ್ರಜಾಪ್ರಭುತ್ವಗಳನ್ನು ಅವುಗಳ ನ್ಯೂನತೆಗಳೊಂದಿಗೆ ರಕ್ಷಿಸುವುದರ ಮಹತ್ವವನ್ನು ಗುರುತಿಸುವ ಅಗತ್ಯವಿದೆ ಎಂದು ಹೇಳಿರುವ ಅವರು,ಹಿಂದಿನ ಸೋವಿಯತ್ ಒಕ್ಕೂಟ,ಅದರ ಪ್ರಧಾನಿ ಜೋಸೆಫ್ ಸ್ಟಾಲಿನ್ ಮತ್ತು ಚೀನಾದ ಆಡಳಿತಗಳನ್ನು 'ವಿಫಲ ಸಮಾಜವಾದಗಳು'ಎಂದು ಚರ್ಚಿಸುವುದಷ್ಟೇ ಸಾಲದು,ಬದಲಿಗೆ ಅವು ವಿಶ್ವದ ಕೆಲವು 'ಅತ್ಯಂತ ಕೆಟ್ಟ ನಿರಂಕುಶವಾದ'ಗಳಾಗಿದ್ದವು ಎಂದು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
'ಭಾರತದಲ್ಲಿ ಫ್ಯಾಸಿಸಂ ಮತ್ತು ಹೆಚ್ಚುತ್ತಿರುವ ನಿರಂಕುಶಾಧಿಕಾರದ ವಿರುದ್ಧ ಪ್ರಜಾಫ್ರಭುತ್ವಕ್ಕಾಗಿ ನಮ್ಮ ಹೋರಾಟವು ನಿರಂತರವಾಗಿರಲು ಹಿಂದಿನ ಮತ್ತು ಪ್ರಸ್ತುತ ಸಮಾಜವಾದಿ ನಿರಂಕುಶ ಪ್ರಭುತ್ವದ ಪ್ರಜೆಗಳು ಸೇರಿದಂತೆ ವಿಶ್ವಾದ್ಯಂತದ ಎಲ್ಲ ಜನರು ಸಮಾನ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರಗಳಿಗೆ ಅರ್ಹರಾಗಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು ' ಎಂದೂ ಕೃಷ್ಣನ್ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಕೃಷ್ಣನ್ ಆಗಾಗ್ಗೆ ಸಮಾಜವಾದಿ ಮತ್ತು ಕಮುನಿಸ್ಟ್ ಆಡಳಿತಗಳನ್ನು ಟೀಕಿಸಿದ್ದಾರೆ.