ಆಗ್ರಾ: ವಿಶ್ವ ಪ್ರಸಿದ್ಧ ತಾಜ್ಮಹಲ್ ವೀಕ್ಷಣೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಈ ನಡುವೆ ಸ್ಪೈನ್ ದೇಶದಿಂದ ಬಂದಿದ್ದ ಮಹಿಳಾ ಪ್ರವಾಸಿಯೊಬ್ಬರ ಮೇಲೆ ಕೋತಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ.
ತಾಜ್ಮಹಲ್ ಮುಂಭಾಗದ ರಾಯಲ್ ಗೇಟ್ ಬಳಿ ಫೊಟೋ ತೆಗೆಯಲೆಂದು ಸ್ಪೈನ್ ದೇಶದ ಮಹಿಳೆ ನಿಂತಿದ್ದರು. ಈ ವೇಳೆ ಕೋತಿಯೊಂದು ಬಂದು ದಾಳಿ ಮಾಡಿದೆ. ಈ ವೇಳೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
2019ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಾಜ್ ಮಹಲ್ನ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿತ್ತು. ಈ ವೇಳೆ ಕೋತಿಗಳನ್ನು ಓಡಿಸಲು ಸಿಂಗಲ್ಶಾಟ್ ಗನ್ ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಪ್ರಾಣಿಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪ್ರವಾಸಿಗರ ಮೇಲೆ ಕೋತಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಸಮಸ್ಯೆ ಬಗೆಹರಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಭಧ್ರತಾ ಸಿಬ್ಬಂದಿ ತಿಳಿಸಿದ್ದಾರೆ.