ಕಾಸರಗೋಡು: ಕೇರಳ ಸೇರಿದಂತೆ ಹನ್ನೊಂದು ರಾಜ್ಯಗಳ ಪಿಎಫ್ ಐ ಕಚೇರಿಗಳು ಮತ್ತು ನಾಯಕರ ಮನೆಗಳ ಮೇಲೆ ಎನ್‍ಐಎ ದಾಳಿ ನಡೆಸಿದೆ. ಅನೇಕ ಜನರನ್ನು ಬಂಧಿಸಲಾಯಿತು. ಕೇರಳ ಸೇರಿದಂತೆ 106 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ತನಿಖಾ ತಂಡವು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇರಳದ ರಾಜ್ಯಾಧ್ಯಕ್ಷರು ಸೇರಿದಂತೆ ನಾಯಕರಿಂದ ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದೆ.
ಪೆರುಂಬಳ ಕಡವತ್‍ನಲ್ಲಿ ಕಾರ್ಯಾಚರಿಸುತ್ತಿರುವ ಪಾಪ್ಯುಲರ್ ಫ್ರಂಟ್‍ನ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಮೇಲೂ ದಾಳಿ ನಡೆದಿದೆ. ನಿನ್ನೆ ಬೆಳಗಿನ ಜಾವ 4 ಗಂಟೆಗೆ ಆರಂಭವಾದ ತಪಾಸಣೆ ಬೆಳಗ್ಗೆ 11 ಗಂಟೆಯವರೆಗೆ ನಡೆಯಿತು. ಎನ್‍ಐಎ ಅಲ್ಲದೆ ಇಡಿ ಮತ್ತು ಮಾದಕ ದ್ರವ್ಯ ವಿಭಾಗಗಳೂ ತಪಾಸಣಾ ತಂಡದಲ್ಲಿದ್ದವು. ಸ್ಥಳದಲ್ಲಿ ಸಿಆರ್‍ಪಿಎಫ್ ಮತ್ತು ಕಾಸರಗೋಡು ಪೋಲೀಸರು ಭದ್ರತೆ ನಿಗಾ ವಹಿಸಿದ್ದರು. ಕಚೇರಿಯಿಂದ ಧ್ವಜ, ಬ್ಯಾನರ್, ಪುಸ್ತಕ ಮತ್ತು ಬ್ಯಾಡ್ಜ್ ಅನ್ನು ಎನ್‍ಐಎ ವಶಪಡಿಸಿಕೊಂಡಿದೆ ಎನ್ನಲಾಗಿದೆ.
ದಾಳಿ ಖಂಡಿಸಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಕಚೇರಿ ಬಳಿಯ ರಸ್ತೆಯಲ್ಲಿ ಬಹಳ ಹೊತ್ತು ಧರಣಿ ಕುಳಿತರು. ತಪಾಸಣಾ ತಂಡ ತೆರಳಿದ ಬಳಿಕ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ನಾಯಮ್ಮಾರಮೂಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಘೋಷಣೆಗಳನ್ನು ಕೂಗುವ ಮೂಲಕ ದಿಗ್ಬಂಧನ ನಡೆಸಲಾಯಿತು. ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಕಚೇರಿಗಳು ಮತ್ತು ನಾಯಕರ ಮನೆಗಳ ಮೇಲೆ ನಡೆದ ದಾಳಿಗಳು ಸಂಘಪರಿವಾರದ ಪಿತೂರಿಯ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ನಾಯಕರು ಆರೋಪಿಸಿದ್ದಾರೆ.