ಕಿವಿ ಕಿರಿಕಿರಿ ಅನಿಸುತ್ತಿದೆ ಎಂದಾಗ ಕೂಡಲೇ ಕಿವಿಗೆ ಈಯರ್ ಬಡ್ಸ್ ಅಥವಾ ಸಿಕ್ಕುವ ಏನಾದರೂ ವಸ್ತುವಿನಿಂದ ಕಿವಿಯ ವ್ಯಾಕ್ಸ್ ಅನ್ನು ತೆಗೆಯುತ್ತೇವೆ. ಅಥವಾ ಕೆಲವರು ಸ್ನಾನ ಮಾಡಿ ಬಂದಾಗ ಕಿವಿಯ ವ್ಯಾಕ್ಸ್ ತೆಗೆಯುವ ಹವ್ಯಾಸವನ್ನು ಹೊಂದಿರುತ್ತಾರೆ. ಇದು ನಿಜಕ್ಕೂ ಅಪಾಯಕಾರಿಯಾಗಿದೆ.
ಹೌದು, ಕಿವಿ ಕ್ಲೀನ್ ಮಾಡಲು ಉಪಕರಣಗಳನ್ನು ಬಳಸುವುದು ಉತ್ತಮವಲ್ಲ. ಅಲ್ಲದೇ ದೇಹವು ವ್ಯಾಕ್ಸ್ ಅಥವಾ ಸೆರುಮೆನ್ ಅನ್ನು ಉತ್ಪಾದಿಸುತ್ತದೆ. ಈ ವ್ಯಾಕ್ಸ್ ಕಿವಿಯ ಒಳ ಪದರದ ರಕ್ಷಣೆಯನ್ನು ಮಾಡುತ್ತದೆ. ಹೀಗಾಗಿ ಇದನ್ನು ತೆಗೆಯುತ್ತ ಇದ್ದರೆ ಒಳ್ಳೆಯದಲ್ಲ ಎನ್ನುವುದು ಸಂಶೋಧಕರ ಮಾತು. ವ್ಯಾಕ್ಸ್ ತೆಗೆಯುವುದರಿಂದ ಕೆಲವರಿಗೆ ಪ್ರಯೋಜನವಾಗಬಹುದೇನೋ, ಇನ್ನು ಕೆಲವರಿಗೆ ಯಾವುದೇ ಪ್ರಯೋಜನವಿರುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಾದರೆ ಕಿವಿಯಲ್ಲಿ ಉತ್ಪಾದನೆಯಾಗುವ ಅಂಟಿನಂತಹ ದ್ರವ ಅಥವಾ ಇಯರ್ ವ್ಯಾಕ್ಸ್ ಕ್ಲೀನ್ ಮಾಡುತ್ತಾ ಇರಬೇಕಾ? ಹಾಗಾದರೆ ಹೇಗೆ ಕ್ಲೀನ್ ಮಾಡಬೇಕು? ಇದಕ್ಕಿರುವ ವಿಧಾನ ಯಾವುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ವ್ಯಾಕ್ಸ್ ಸ್ವಚ್ಛಗೊಳಿಸುವ ಬಗ್ಗೆ ತಿಳಿದುಕೊಳ್ಳುವ ಮುನ್ನ ನಾವು ಕಿವಿಯ ಬಗ್ಗೆ ತಿಳಿದುಕೊಳ್ಳಬೇಕಿದೆ. ಹೌದು, ಕಿವಿ ಎಂಬುವುದು ಅದು ತುಂಬ ನಾಜೂಕಿನ ಅಂಗ. ಕೆಲವು ಜನ ಪದೇ ಪದೆ ಕಿವಿಗೆ ಕಡ್ಡಿಯನ್ನು ತೂರಿಸಿಕೊಳ್ಳುತ್ತಾರೆ. ತುರಿಸಿಕೊಳ್ಳುತ್ತಾರೆ. ಭಾರೀ ಕಸ ಬರುವಂತೆ ಕೆರೆಯುತ್ತಾರೆ. ನಿಜವಾಗಿ ಹೇಳಬೇಕೆಂದರೆ, ಕಿವಿಯನ್ನು ಅಷ್ಟೆಲ್ಲ ಸ್ವಚ್ಛಗೊಳಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಒಂದೊಮ್ಮೆ ಕಿವಿಯಲ್ಲಿ ವ್ಯಾಕ್ಸ್ ಬಂದಾಗ ತುಂಬ ಎಚ್ಚರಿಕೆಯಿಂದ ಸ್ವಚ್ಛ ಮಾಡಿಕೊಳ್ಳಬೇಕು. ಹಾಗಾದರೆ ಕಿವಿಯ ಪದರಗಳು ಹೇಗೆ ಇರುತ್ತದೆ? ಬನ್ನಿ ಮುಂದೆ ಓದೋಣಾ.
ಕಿವಿಯ ಬಗ್ಗೆ ತಿಳಿದುಕೊಳ್ಳೋಣಾ
ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
1. ಹೊರಗಿನ ಕಿವಿ
*ಪಿನ್ನಾ ಎಂಬುದು ಕಿವಿಯ ಅತ್ಯಂತ ಗೋಚರವಾದ ಭಾಗವಾಗಿದೆ ಮತ್ತು ವಿವಿಧ ಚಡಿಗಳನ್ನು ಹೊಂದಿರುವ ಸುರುಳಿಯಾಕಾರದ ಆಕಾರವನ್ನು ಹೊಂದಿದೆ.
*ಬಾಹ್ಯ ಶ್ರವಣೇಂದ್ರಿಯ ಕಾಲುವೆಯು ಹೊರಗಿನ ಗೋಚರ ಕಿವಿ ರಂಧ್ರದಿಂದ ಪ್ರಾರಂಭವಾಗುತ್ತದೆ ಮತ್ತು ಇಯರ್ ಡ್ರಮ್ / ಟೈಂಪನಿಕ್ ಮೆಂಬರೇನ್ ವರೆಗೆ ಸಾಗುತ್ತದೆ.
2.ಮಧ್ಯದ ಕಿವಿ
ಮಧ್ಯದ ಕಿವಿಯು ಇಯರ್ ಡ್ರಮ್‌ನ ಇನ್ನೊಂದು ಬದಿಯಲ್ಲಿರುವ ಮುಂದಿನ ವಿಭಾಗವಾಗಿದೆ. ಇದು ದೇಹದಲ್ಲಿನ ಮೂರು ಚಿಕ್ಕ ಮೂಳೆಗಳನ್ನು ಹೊಂದಿದೆ - ಮಲ್ಲಿಯಸ್, ಇಂಕಸ್ ಮತ್ತು ಸ್ಟೇಪ್ಸ್ ಇದು ಧ್ವನಿ ತರಂಗಗಳನ್ನು ಒಳಗಿನ ಕಿವಿಗೆ ಸಾಗಿಸಲು ಸಹಾಯ ಮಾಡುತ್ತದೆ.
3. ಒಳಗಿನ ಕಿವಿ
ಒಳಗಿನ ಕಿವಿಯು ಶ್ರವಣಕ್ಕೆ ಕಾರಣವಾದ ಕೋಕ್ಲಿಯಾವನ್ನು ಹೊಂದಿದೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ವೆಸ್ಟಿಬುಲರ್ ಸಿಸ್ಟಮ್ ಹೊಂದಿದೆ.
ಇಯರ್ ವ್ಯಾಕ್ಸ್ ಹೇಗೆ ಉಂಟಾಗುತ್ತದೆ?
ಕಿವಿ ಕಾಲುವೆಯ ಹೊರಭಾಗದಲ್ಲಿರುವ ಚರ್ಮವು ಕೆಲವು ಗ್ರಂಥಿಗಳನ್ನು ಹೊಂದಿದ್ದು ಅದು ಕಿವಿ ಮೇಣವನ್ನು (ಇಯರ್ ವ್ಯಾಕ್ಸ್) ಅಭಿವೃದ್ಧಿಪಡಿಸುತ್ತದೆ. ಇದನ್ನು ಸೆರುಮೆನ್ ಎಂದೂ ಕರೆಯುತ್ತಾರೆ. ನಿಮ್ಮ ಕಿವಿಗಳಿಗೆ ಹಾನಿ ಮತ್ತು ಇತರ ಸೋಂಕುಗಳು ಬರದಂತೆ ತಡೆಯಲು ಈ ನೈಸರ್ಗಿಕ ಮೇಣವಿದೆ. ಇದಲ್ಲದೆ, ಸಾಮಾನ್ಯವಾಗಿ, ಸ್ವಲ್ಪ ಮೇಣವು ಕಾಲಕಾಲಕ್ಕೆ ಸಂಗ್ರಹವಾಗುತ್ತಾ ಹೋಗುತ್ತದೆ, ನಂತರ ಒಣಗುತ್ತದೆ. ಇದು ಕಿವಿ ಕಾಲುವೆಯಿಂದ ಬೀಳುತ್ತದೆ. ಕಿವಿ ಮೇಣವು ಅದರಲ್ಲಿರುವ ಅನಗತ್ಯ ತ್ಯಾಜ್ಯ ಕಣಗಳನ್ನು ಒಳಗೊಂಡಿದೆ.
ಇಯರ್ ವ್ಯಾಕ್ಸ್ ಇದ್ದರೆ ಒಳ್ಳೆಯದು?
ಕಿವಿಯಲ್ಲಿ ಉಂಟಾಗುವ ವ್ಯಾಕ್ಸ್ ಅಥವಾ ಮೇಣ ಅನ್ನು ತುಂಬ ಜನ ಏನೂ ಪ್ರಯೋಜನಕ್ಕೆ ಬಾರದ ಅನುತ್ಪಾದಕ ಅಂಶ ಎಂದು ಭಾವಿಸುತ್ತಾರೆ. ಆದರೆ, ಇದು ಕಿವಿಯ ಆರೋಗ್ಯ ಕಾಪಾಡುವಲ್ಲಿ ಭಾರೀ ಪ್ರಮುಖ ಪಾತ್ರ ವಹಿಸುತ್ತದೆ. ಕಿವಿಯಲ್ಲಿ ಅಂಟಿನಂತಹ ದ್ರವ ಉಂಟಾಗುವುದು ದೇಹದ ಅತ್ಯಂತ ಸಹಜ ಕ್ರಿಯೆ. ಇದು ಕಿವಿ ಶುಷ್ಕವಾಗದಂತೆ ನೋಡಿಕೊಂಡು ಅವುಗಳ ರಕ್ಷಣೆ ಮಾಡುತ್ತದೆ. ಒಂದೊಮ್ಮೆ ಸೂಕ್ತ ಪ್ರಮಾಣದಲ್ಲಿ ವ್ಯಾಕ್ಸ್ ಉಂಟಾಗದಿದ್ದಾಗ ಕಿವಿಗಳು ಶುಷ್ಕವಾಗುತ್ತವೆ. ಆಗ ತುರಿಕೆ ಕಂಡುಬರುತ್ತದೆ.ಅಚ್ಚರಿಯೆಂದರೆ, ಇಯರ್ ವ್ಯಾಕ್ಸ್ ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿರುತ್ತದೆ. ಇದರ ಕಾರಣದಿಂದ ಕಿವಿ ತನ್ನ ಸ್ವಚ್ಛತೆಯನ್ನು ತಾನೇ ಮಾಡಿಕೊಳ್ಳುತ್ತದೆ. ಇಯರ್ ವ್ಯಾಕ್ಸ್ ಕಿವಿಗಳಿಗೆ ಒಂದು ಫಿಲ್ಟರ್ ನಂತೆ ಕೆಲಸ ಮಾಡುತ್ತದೆ. ಕಸ, ಧೂಳುಗಳಿಂದ ನಮ್ಮ ಕಿವಿಗಳನ್ನು ರಕ್ಷಣೆ ಮಾಡುತ್ತದೆ ಹಾಗೂ ಅವು ಕಿವಿಯೊಳಗೆ ಪ್ರವೇಶಿಸದಂತೆಯೂ ನೋಡಿಕೊಳ್ಳುತ್ತದೆ.