ಚೀನಾ ಸೇನೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಿದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ವರಿಷ್ಠರು ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ಜಿನ್ ಪಿಂಗ್ ಅವರನ್ನು ವಜಾಗೊಳಿಸಿದೆ ಎಂದು ಹಲವಾರು ಚೀನಾದ ಸಾಮಾಜಿಕ ಮಾಧ್ಯಮ ನಿರ್ವಾಹಕರು ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿಜವಾಗಿಯೂ ಗೃಹಬಂಧನದಲ್ಲಿದ್ದಾರೆಯೇ? ಈ ವದಂತಿಯ ಹಿಂದಿನ ನಿಜಾಂಶ ಬೇಗನೆ ಬಹಿರಂಗಗೊಳಿಸಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಟ್ವಿಟ್ಟರ್ ನಲ್ಲಿ #xijinping ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನ ಮಾಡುವ ಮೂಲಕ ಪಿಎಲ್‌ಎ ದಂಗೆ ನಡೆಸಿದೆ ಎಂದು ಚೀನಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಮತ್ತು ಚೀನಾದ ಮಾಜಿ ಪ್ರಧಾನಿ ವೆನ್ ಜಿಯಾಬಾವೊ ಅವರ ಆದೇಶದ ಮೇರೆಗೆ ಚೀನಾದ ಅಧ್ಯಕ್ಷರನ್ನು ಗೃಹಬಂಧನದಲ್ಲಿರಿಸಲಾಗಿದೆ ಎನ್ನಲಾಗಿದೆ. ಸ್ಥಾಯಿ ಸಮಿತಿಯ ಮಾಜಿ ಸದಸ್ಯ ಸಾಂಗ್ ಪಿಂಗ್ ಅವರನ್ನು ಚೀನಾದ ಸೆಂಟ್ರಲ್ ಗಾರ್ಡ್ ಬ್ಯೂರೋ(CGB) ನಿಯಂತ್ರಣವನ್ನು ಹಿಂದಕ್ಕೆ ಪಡೆಯಲು ಒಪ್ಪಿಸಿದ್ದಾರೆ ಎನ್ನಲಾಗಿದೆ ಎಂದು ನ್ಯೂಸ್ ಹೈಲ್ಯಾಂಡ್ ವಿಷನ್‌ನ ನಲ್ಲಿ ವರದಿ ಪ್ರಕಟವಾಗಿದೆ.
ಈ ವರದಿ ಆಧರಿಸಿ ಸ್ವಾಮಿ ಟ್ವೀಟ್ ಮಾಡಿದ್ದು, ಚೀನಾ ಕುರಿತು ಹೊಸ ವದಂತಿ ಇದೆ. ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೇ ಎಂಬುದನ್ನು ತನಿಖೆ ಮಾಡಬೇಕು? ಜಿನ್‌ಪಿಂಗ್ ಸಮರ್‌ಕಂಡ್‌ನಲ್ಲಿದ್ದಾಗ, ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರು ಅವರನ್ನು ಸೇನಾ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಿದ್ದು ಬಳಿಕ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ವದಂತಿ ಹಬ್ಬಿದೆ. ಇದರ ಜೊತೆಗೆ ಸ್ವಾಮಿ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
ಎಸ್ಸಿಓ ಸಭೆ ನಂತರ ಸಮರ್‌ಕಂಡ್‌ನಿಂದ ಹಿಂದಿರುಗಿದ ಕ್ಸಿ ಜಿನ್ ಪಿಂಗ್ ಅವರನ್ನು ಸೆಪ್ಟೆಂಬರ್ 16ರಂದು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪ್ರಸ್ತುತ ಅವರು ಗೃಹಬಂಧನದಲ್ಲಿದ್ದಾರೆ ಎಂದು ವರದಿಗಳು ಹೇಳಿವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ. ಆದರೆ ಈ ಹೇಳಿಕೆಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಇನ್ನಷ್ಟೇ ಬಯಲಾಗಬೇಕಿದೆ.