ನವದೆಹಲಿ: ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಬುಧವಾರ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ಅವರನ್ನು ಭೇಟಿಯಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ಕುರಿತು ಮಿಸ್ತ್ರಿ ಅವರೊಂದಿಗೆ ತರೂರು ಮಾತುಕತೆ ನಡೆಸಿದ್ದಾರೆ. ತರೂರ್ ಅವರೊಂದಿಗಿನ ಭೇಟಿ ಕುರಿತು ಪ್ರತಿಕ್ರಿಯಿಸಿದ ಮಿಸ್ತ್ರಿ, ಮತದಾರರ ಪಟ್ಟಿ, ಚುನಾವಣಾ ಏಜೆಂಟ್ ಮತ್ತು ನಾಮಪತ್ರ ಸಲ್ಲಿಕೆ ಕುರಿತು ಚರ್ಚಿಸಿರುವುದಾಗಿ ತಿಳಿಸಿದ್ದಾರೆ ಎಂದು 'ಪಿಟಿಐ' ವರದಿ ಮಾಡಿದೆ.
ಶಶಿ ತರೂರ್ ಅವರ ಸ್ಪರ್ಧೆಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಹಸಿರು ನಿಶಾನೆ ತೋರಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಸಹ ಆಕಾಂಕ್ಷಿಯಾಗಿದ್ದು, ಚುನಾವಣಾ ಕಣ ರಂಗೇರುವ ನಿರೀಕ್ಷೆ ಇದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೆ.24ರಿಂದ 30ರವರೆಗೆ ನಡೆಯಲಿದೆ. ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅ.17 ರಂದು ಚುನಾವಣೆ ನಡೆಯಲಿದೆ. ಅ.19 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.