ಮುಂಬೈ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸ ಮತ್ತು ಮಾಂಸಾಹಾರದ ಉತ್ಪನ್ನಗಳ ಜಾಹೀರಾತುಗಳಿಗೆ ನಿರ್ಬಂಧ ಹೇರಬೇಕೆಂದು ಮನವಿ ಮಾಡುವ ಮೂಲಕ ಜೈನ ಧರ್ಮದ ಮೂರು ಚಾರಿಟೇಬಲ್ ಟ್ರಸ್ಟ್‌ಗಳು ಹಾಗೂ ಜೈನಧರ್ಮವನ್ನು ಆಚರಿಸುತ್ತಿರುವ ಮುಂಬೈ ನಿವಾಸಿಗಳು, ಇತರರ ಹಕ್ಕುಗಳನ್ನು ಅತಿಕ್ರಮಿಸುವ ಪ್ರಯತ್ನವನ್ನು ಏಕೆ ಮಾಡುತ್ತಿದ್ದಾರೆ ಎಂದು ಸೋಮವಾರ ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ, ನ್ಯಾಯಮೂರ್ತಿ ಮಾಧವ್ ಜಾಮ್‌ದಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, 'ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಮತ್ತು ಅದು ನಿಷೇಧವನ್ನು ವಿಧಿಸುವ ಕಾನೂನು ಅಥವಾ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ' ಎಂದು ಹೇಳಿದೆ.
ಮೂರು ಧಾರ್ಮಿಕ ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಜೈನ ಧರ್ಮವನ್ನು ಅಭ್ಯಾಸ ಮಾಡುವ ಮುಂಬೈನ ನಿವಾಸಿಗಳು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, 'ಮಕ್ಕಳು ಮತ್ತು ತಮ್ಮ ಕುಟುಂಬಗಳು ಮಾಂಸ ಮತ್ತು ಮಾಂಸಾಹಾರದ ಉತ್ಪನ್ನಗಳ ಜಾಹೀರಾತುಗಳನ್ನು ಒತ್ತಾಯಪೂರ್ವಕವಾಗಿ ವೀಕ್ಷಿಸುವಂತಾಗಿದೆ. ಇದು ಶಾಂತಿಯುತವಾಗಿ ಬದುಕುವ ಅವರ ಹಕ್ಕನ್ನು ಉಲ್ಲಂಘಿಸಿದೆ. ಅಷ್ಟೇ ಅಲ್ಲ, ಇಂಥ ಜಾಹೀರಾತುಗಳು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತದೆ' ಎಂದು ವಾದಿಸಿದ್ದಾರೆ.
ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಅರ್ಜಿಯಲ್ಲಿ ಮಾಡಿದ ಮನವಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿತು. 'ಸಂವಿಧಾನದ 19ನೇ ವಿಧಿಯ ಉಲ್ಲಂಘನೆಯ ಬಗ್ಗೆ ಏನು ಹೇಳುವಿರಿ? ನೀವು (ಅರ್ಜಿದಾರರು) ಇತರರ ಹಕ್ಕುಗಳನ್ನು ಏಕೆ ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದೀರಿ? ನೀವು ನಮ್ಮ ಸಂವಿಧಾನದ ಪೀಠಿಕೆಯನ್ನು ಓದಿದ್ದೀರಾ? ಅದು ಕೆಲವು ಭರವಸೆಗಳನ್ನು ನೀಡುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಪ್ರಶ್ನಿಸಿದರು.
'ಮದ್ಯಪಾನ ಮತ್ತು ಧೂಮಪಾನದ ಜಾಹೀರಾತುಗಳನ್ನು ಸರ್ಕಾರವು ಈಗಾಗಲೇ ನಿಷೇಧಿಸಿದ್ದು, ಅವುಗಳಂತೆಯೇ ಮಾಂಸಾಹಾರವು ಆರೋಗ್ಯಕರವಲ್ಲ. ಜೊತೆಗೆ ಇದು ಪರಿಸರಕ್ಕೂ ಹಾನಿಕಾರಕ. ಇಂಥ ಜಾಹೀರಾತುಗಳು ಯುವಕರನ್ನು ಮಾಂಸಾಹಾರ ಸೇವಿಸುವಂತೆ ಪ್ರಚೋದಿಸುತ್ತವೆ. ಅಂಥ ಆಹಾರದ ಸೇವನೆ ಅಥವಾ ಮಾರಾಟವನ್ನು ನಾವು ವಿರೋಧಿಸುವುದಿಲ್ಲ. ಆದರೆ, ನಮ್ಮ ಆಕ್ಷೇಪ ಇರುವುದು ಜಾಹೀರಾತುಗಳ ಬಗ್ಗೆ ಮಾತ್ರ' ಎಂದು ಅರ್ಜಿದಾರರು ವಾದ ಮಂಡಿಸಿದರು.
ಬಳಿಕ, ಅರ್ಜಿದಾರರು ಇತರ ಹೈಕೋರ್ಟ್‌ಗಳ ಸಂಬಂಧಿತ ಆದೇಶಗಳನ್ನು ಸಲ್ಲಿಸಲು ಅರ್ಜಿಯನ್ನು ತಿದ್ದುಪಡಿ ಮಾಡಲು ಕೋರಿದರು. ಅರ್ಜಿಯನ್ನು ಹಿಂಪಡೆದು ಹೊಸದಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠವು ಅರ್ಜಿದಾರರಿಗೆ ಸೂಚಿಸಿತು.