ಕಾಸರಗೋಡು: ಆಧ್ಯಾತ್ಮಿಕ ಸಾಧನೆಗೆ ಶರೀರ ಮೂಲಕಾರಣವಾಗಿರುವಂತೆ ಕಾವ್ಯದ ಸಾಕ್ಷಾತ್ಕಾರಕ್ಕೆ ಭಾಷೆಯೇ ಸಾಧನವಾಗಿದೆ ಎಂಬುದಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ. ಬಿ.ವಿ ವಸಂತ ಕುಮಾರ್ ತಿಳಿಸಿದ್ದಾರೆ.
ಅವರು ಕರ್ನಾಟಕ ಸಾಹಿತ್ಯ ಅಕಾಡಮಿ, ಶ್ರೀಎಡನೀರು ಮಠ ಮತ್ತು ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಸಹಯೋಗದಲ್ಲಿ ಎಡನೀರು ಮಠದ ಸಭಾಂಗಣದಲ್ಲಿ ಗುರುವಾರ ಆರಂಭಗೊಂಡ ಮೂರು ದಿವಸಗಳ ರಾಷ್ಟ್ರೀಯ ಮಟ್ಟದ ಕಾವ್ಯ ಕಮ್ಮಟದ ಅಂಗವಾಗಿ ಶುಕ್ರವಾರ ನಡೆದ 'ಕಾವ್ಯ ಭಾಷೆ: ಅಬಿವ್ಯಕ್ತಿಯ ಸಾಧ್ಯತೆ'ವಿಷಯದಲ್ಲಿ ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಿ ಮಾತನಾಡಿದರು. ಕಮ್ಮಟ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಮಾತನಾಡಿ, ಕಾವ್ಯ ಹೃಷಯದ ಭಾಷೆಯಾಗಿದ್ದು, ಇದು ಅರ್ಥ, ಧ್ವನಿ, ನಾದ ಮತ್ತು ಭಾವಲೋಕದ ಮೂಲಕ ವ್ಯವಹರಿಸುತ್ತದೆ. ಅನುಭವಗಳನ್ನು ಕಟ್ಟಿಕೊಡುವುದು ಉತ್ತಮ ಕಾವ್ಯದ ಲಕ್ಷಣವಾಗಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ನಾಗರಾಜ್ ತಲಕಾಡು, ಜಿಲ್ಲಾ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್ ಮೂಡಿತ್ತಾಯ ಉಪಸ್ಥಿತರಿದ್ದರು. ಮೈಸೂರಿನ ಬಿ.ಆರ್. ಸೂರಜ್ ಅವರು ಲಯ ಮತ್ತು ತಾಳದ ಕುರಿತಾದ ಲಯ-ಧ್ಯಾನ ಎಂಬ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಪದ್ಯಾಣ ಗಣಪತಿ ಭಟ್ ಮತ್ತು ಮುಳಿಯ ಶಂಕರ ಭಟ್ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾವ್ಯದ ಸಾಕ್ಷಾತ್ಕಾರಕ್ಕೆ ಭಾಷೆಯೇ ಸಾಧನ: ರಾಷ್ಟ್ರೀಯ ಕಾವ್ಯ ಕಮ್ಮಟದಲ್ಲಿ ಗೋಷ್ಠಿ ಅಧ್ಯಕ್ಷತೆ ವಹಿಸಿ ಡಾ. ಬಿ.ವಿ ವಸಂತ ಕುಮಾರ್ ಅಭಿಮತ
0
ಸೆಪ್ಟೆಂಬರ್ 23, 2022