ಕಾಸರಗೋಡು: ನೀಲೇಶ್ವರ ಸಮೀಪದ ಎಡೈಯಿಲಕ್ಕಾಡ್ ಕಾವ್(ವನ) ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಾನರರಿಗೆ ಭೂರಿ ಓಣಂ ಔತಣವನ್ನು ಓಣಂ ಕೊನೆಯ ದಿನದಂದು ಸಿದ್ಧಪಡಿಸಲಾಗಿತ್ತು. ನವೋದಯ ಗ್ರಂಥಾಲಯ ಬಾಲವೇದಿ ನೇತೃತ್ವದಲ್ಲಿ ಔತಣ ಕೂಟ ನಡೆಯಿತು. 15ನೇ ವರ್ಷದ ಔತಣಕೂಟದ ಕಾರಣ 15 ಖಾದ್ಯಗಳನ್ನು ಹಣ್ಣು-ತರಕಾರಿಗಳ ಸಹಿತ ವಾನರರಿಗೆ ನೀಡಲಾಯಿತು.
80ರ ಹರೆಯದ ಮಾಣಿಕಮ್ಮ ಉಪ್ಪು ಬೆರೆಸದ ಸಪ್ಪೆ ಅನ್ನ ಬಡಿಸುತ್ತಿದ್ದಂತೆ ಕೋತಿಗಳ ಹಿಂಡು ಒಂದೊಂದಾಗಿ ಓಣಂ ಸದ್ಯ(ಭೋಜನ)ಸೇವಿಸಲು ಸಾಲುಸಾಲಾಗಿ ದಾಂಗುಡಿಯಿಟ್ಟವು. ವರ್ಷಗಳಿಂದ ಮಂಗಗಳಿಗೆ ಔತಣ ಬಡಿಸುತ್ತಿದ್ದ 80 ವರ್ಷದ ಮಹಿಳೆ ಮಾಣಿಕಮ್ಮ ಅಸ್ವಸ್ಥಗೊಂಡು ಹಾಸಿಗೆ ಹಿಡಿದಿದ್ದರು. ಈ ಬಾರಿ ಎಲ್ಲವನ್ನೂ ಪಕ್ಕಕ್ಕಿರಿಸಿ ಭೋಜನ ನೀಡಲು ಆಗಮಿಸಿದ್ದರು.
ಬಾಳೆ ಎಲೆಗಳಲ್ಲಿ ಹರಡಿದ ಬೀಟ್ರೂಟ್ ಮತ್ತು ಸಿಹಿ ಹಣ್ಣುಗಳÀನ್ನು ಜೋಡಿಸಲಾಗಿತ್ತು. ಕುಡಿಯಲು ಸ್ಟೀಲ್ ಗ್ಲಾಸ್ ಗಳಲ್ಲಿ ನೀರು ಇಡಲಾಗಿತ್ತು. ಹಲಸು, ಅನಾನಸ್, ಬಾಳೆ ಹಣ್ಣು, ಕುಂಬಳಕಾಯಿ, ಸಿಹಿ ಕುಂಬಳ, ಪೇರಲ, ಟೊಮೆಟೊ, ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ ಮತ್ತು ಮುಳ್ಳುಸೌತೆಗಳೇ ಮೊದಲಾದ ಭಕ್ಷ್ಯಗಳಿದ್ದವು.
ಎಲ್ಲಾ ಕಪಿಗಳಿಗೂ ಬೀಟ್ರೂಟ್ ಹೆಚ್ಚು ಇಷ್ಟಪಟ್ಟಂತೆ ಕಂಡುಬಂತು. ವಾನರ ಸಂಗಮ ಎರಡು ಗುಂಪುಗಳಲ್ಲಿ ಸಾಲುಗಟ್ಟಿ ನಿಂತಿತ್ತು. ಗದ್ದಲದಿಂದ ತುಂಬಿದ್ದ ಕೋತಿಗಳ ಗುಂಪು ಸಂತೋಷದಿಂದ ಔತಣ ಸವಿದವು. ವನವನ್ನು ಹಸಿರು ಎಲೆಗಳು, ಕುಂಕುಮ ಮತ್ತು ಇತರ ಹೂಗಳಿಂದ ಅಲಂಕರಿಸಲಾಗಿತ್ತು. ನವೋದಯ ಗ್ರಂಥಾಲಯದ ಕಾರ್ಯಕರ್ತ ಪಿ.ವೇಣುಗೋಪಾಲ್ ಮಾತನಾಡಿ, ಎಡೈಯಿಲಕಾಡ್ ಕಾವಿನಲ್ಲಿ ಜೀವ ವೈವಿಧ್ಯತೆಯ ಶ್ರೀಮಂತಿಕೆಯನ್ನು ಕಾಪಾಡುವ ಧ್ಯೇಯವೂ ಈ ಓಣಸದ್ಯಕ್ಕಿದೆ ಎಂದಿರುವರು.
ಹನ್ನೊಂದು ಎಕರೆ ವಿಸ್ತೀರ್ಣದ ಎಡೈಯಿಲಕ್ಕಾಡ್ ಕಾವ್ ನಲ್ಲಿ ಸುಮಾರು 40 ಮಂಗಗಳು ವಾಸಿಸುತ್ತಿವೆ. ಇದು ದೇವಸ್ಥಾನದ ಒಡೆತನದ ವನವಾಗಿದೆ. ಇದನ್ನು ಈಗ ನವೋದಯ ಗ್ರಂಥಾಲಯದ ಕಾರ್ಯಕರ್ತರು ಸಂರಕ್ಷಿಸಿದ್ದಾರೆ. ತ್ರಿಶೂರ್ ಮೃಗಾಲಯದ ಸಹಯೋಗದಲ್ಲಿ ನಡೆಸಿದ ಅಧ್ಯಯನವು ವನದಲ್ಲಿ ಮಂಗಗಳ ಸಂಖ್ಯೆ ಕಡಿಮೆಯಾದ ಕಾರಣ ಉಪ್ಪುಸಹಿತ ಆಹಾರವು ಮಂಗಗಳ ಸಂತಾನೋತ್ಪತ್ತಿ ಸಾಮಥ್ರ್ಯವನ್ನು ನಾಶಪಡಿಸುತ್ತಿರುವುದರಿಂದ ಸಪ್ಪೆ ಅನ್ನ ನೀಡಲು ತೀರ್ಮಾನಿಸಲಾಗಿದೆ. ವನದಲ್ಲಿ ಸುಮಾರು 200 ವಿವಿಧ ಜಾತಿಯ ಸಸ್ಯಗಳು ಬೆಳೆಯುತ್ತವೆ. ಒರಿಲತಾಮರ ಎಂಬ ಅಪರೂಪದ ಮೂಲಿಕೆ ಇಲ್ಲಿ ಕಂಡುಬರುತ್ತದೆ.