ಬೆಲ್‌ಗ್ರೇಡ್ : ಭಾನುವಾರ ಬೆಲ್ಗ್ರೇಡ್ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಜರಂಗ್ ಪೂನಿಯಾ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದು, ಆ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 4 ಪದಕ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಜರಂಗ್, ಭಾನುವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಸ್ಪರ್ಧೆಯ 65 ಕೆ.ಜಿ. ವಿಭಾಗದಲ್ಲಿ ಪೋರ್ಟೊ ರಿಕೊದ ಸೆಬಾಸ್ಟಿಯನ್ ಸಿ ರಿವೇರಾ ವಿರುದ್ಧ 11-9 ಅಂಕಗಳ ಅಂತರದಿಂದ ಜಯ ಸಾಧಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಜಾನ್ ಮೈಕೆಲ್ ಡಯಾಕೊಮಿಹಾಲಿಸ್ ವಿರುದ್ಧ ಸೋತಿದ್ದ ಬಜರಂಗ್, ರೆಪೇಚ್ ಸುತ್ತಿನಲ್ಲಿ ಸೆಣಸಾಡಿ ಕಂಚಿನ ಪದಕಕ್ಕೆ ಮುತ್ತಿಟ್ಟರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಜರಂಗ್ರ ತಲೆಗೆ ಪೆಟ್ಟಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಪಂದ್ಯದಿಂದ ಹಿಂದೆ ಸರಿಯುವ ಅವಕಾಶವನ್ನು ಬಜರಂಗ್ಗೆ ನೀಡಲಾಗಿತ್ತಾದರೂ, ಬಜರಂಗ್ ಅವರು ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಎದುರಾಳಿ ಜತೆ ಸೆಣಸಾಡಿ ಗೆಲುವಿನ ನಗೆ ಬೀರಿದರು.
ಇದು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬಜರಂಗ್ ಅವರು ಪಡೆದ ಮೂರನೇ ಕಂಚಿನ ಪದಕ ಇದಾಗಿದೆ. ಒಟ್ಟು 4 ಪದಕಗಳು ಇವರಿಗೆ ಒಲಿದಿದೆ. 2013ರಲ್ಲಿ ಕಂಚು, 2018ರಲ್ಲಿ ಬೆಳ್ಳಿ, 2019ರಲ್ಲಿ ಕಂಚು, 2022ರಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ಭಾರತದ 30 ಕುಸ್ತಿಪಟುಗಳು ಕಣಕ್ಕಿಳಿದಿದ್ದರಾದರೂ ಇಲ್ಲಿಯವರೆಗೆ 2 ಪದಕ ಮಾತ್ರ ಗೆಲ್ಲಲಾಗಿದೆ. 53 ಕೆಜಿ ವಿಭಾಗದಲ್ಲಿ ವಿನೇಶ್ ಪೋಗಟ್ ಕಂಚಿನ ಪದಕ ಗೆದ್ದಿದ್ದಾರೆ.