ನವದೆಹಲಿ: ಉಡುಗೊರೆ ಮತ್ತು ಹಣಕಾಸು ಸೌಲಭ್ಯಗಳ ಆಮಿಷವೊಡ್ಡಿ ಮೋಸದಿಂದ ಮಾಡುವ ಮತಾಂತರ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೊಳಿಸಲು ಕೋರಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು, ನ.14ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿತು.
ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಉಡುಗೊರೆ, ಆರ್ಥಿಕ ನೆರವಿನ ಆಮಿಷ ತೋರಿಸಿ ಅಥವಾ ಬೆದರಿಸಿ ಮೋಸದಿಂದ ಮಾಡುವ ಮತಾಂತರ ತಡೆಗೆ ಕಠಿಣ ಕಾನೂನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ದ್ವಿಸದಸ್ಯ ಪೀಠ ನಡೆಸಿತು.
ದೇಶವ್ಯಾಪಿಯಾಗಿರುವ ಬಲವಂತದ ಮತಾಂತರ ಸಮಸ್ಯೆಯನ್ನು ತಕ್ಷಣವೇ ನಿಭಾಯಿಸುವ ಅಗತ್ಯವಿದೆ ಎಂದು ಅರ್ಜಿದಾರರ ಪರ ವಕೀಲ ಅಶ್ವಿನಿ ಕುಮಾರ್ ದುಬೆ ಅವರು ಪೀಠಕ್ಕೆ ಮನವಿ ಮಾಡಿದರು. ಬಲವಂತದ ಮತಾಂತರ ನಿಯಂತ್ರಣಕ್ಕೆ ಕಠಿಣ ಮಸೂದೆಗಾಗಿ ವರದಿ ಸಿದ್ಧಪಡಿಸಲು ಕೇಂದ್ರ ಕಾನೂನು ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.