ಕೊಚ್ಚಿ: ವಾಯುಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗಲೇ ಪ್ರಾಣಪಕ್ಷಿ ಹಾರಿಹೋದ ಪ್ರಸಂಗವಿದು. ಅರ್ಥಾತ್, ಮಹಿಳೆಯೊಬ್ಬರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ನಿನ್ನೆ ರಾತ್ರಿ ವಿಮಾನವೊಂದರಲ್ಲಿ ಈ ಪ್ರಕರಣ ನಡೆದಿದೆ.
ಮಿನಿ ಎಂಬ ಹೆಸರಿನ 56 ವರ್ಷದ ಮಹಿಳೆ ಸಾವಿಗೀಡಾದವರು. ನಿನ್ನೆ ಕೊಚ್ಚಿಯಿಂದ ವಿಮಾನದಲ್ಲಿ ದುಬೈಗೆ ಪ್ರಯಾಣಿಸುತ್ತಿದ್ದ ಇವರು ನಿನ್ನೆ ವಿಮಾನದಲ್ಲೇ ಎಚ್ಚರ ತಪ್ಪಿ ಬಿದ್ದಿದ್ದರು. ಬಳಿಕ ಅವರನ್ನು ದುಬೈನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಅದಾಗಲೇ ಸಾವಿಗೀಡಾದ್ದನ್ನು ಸ್ಪಷ್ಟಪಡಿಸಿದರು. ಆಕೆ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಇದು ಸಹಜ ಸಾವಾದ್ದರಿಂದ ಪೊಲೀಸರು ಕೇಸು ದಾಖಲಿಸಿಕೊಂಡಿಲ್ಲ ಎಂಬುದಾಗಿ ವೈಮಾನಿಕ ಸಂಸ್ಥೆಯವರು ಸ್ಪಷ್ಟಪಡಿಸಿದ್ದಾರೆ.