ರಿಯಾದ್: ಸೌದಿ ಅರೇಬಿಯಾದ ರಾಷ್ಟ್ರೀಯ ದಿನಾಚರಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೌದಿ ಅರೇಬಿಯಾದ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಅಧಿಕೃತ ಭೇಟಿಯನ್ನು ಮುಕ್ತಾಯಗೊಳಿಸಿದ್ದಾರೆ.
'ರಾಜಕೀಯ, ವ್ಯಾಪಾರ, ಇಂಧನ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಕ್ರಮಗಳ ಕುರಿತು ಚರ್ಚಿಸಲಾಗಿದೆ' ಎಂದು ಭಾರತೀಯ ರಾಯಭಾರ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
'ಜೈಶಂಕರ್ ಅವರು ಭಾನುವಾರ ಜೆಡ್ಡಾದಲ್ಲಿ ಮೊಹಮ್ಮದ್ ಅವರನ್ನು ಭೇಟಿಯಾಗಿ, ಪ್ರಧಾನಿ ಮೋದಿಯವರ ಲಿಖಿತ ಸಂದೇಶವನ್ನು ಹಸ್ತಾಂತರಿಸಿದರು. ಇದೇ 23ರಂದು ಸೌದಿ ಅರೇಬಿಯಾದ ರಾಷ್ಟ್ರೀಯ ದಿನಾಚರಣೆ ಆಚರಿಸುತ್ತಿದ್ದು ಶುಭಾಶಯಗಳನ್ನೂ ಕೋರಿದರು' ಎಂದೂ ಪ್ರಕಟಣೆ ತಿಳಿಸಿದೆ.
ಮೊಹಮ್ಮದ್ ಅವರು 2019ರ ಫೆಬ್ರುವರಿಯಲ್ಲಿ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.