ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ ಐತಿಹಾಸಿಕ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ತಾ ಲಾನ್ಸ್ ಇನ್ಮುಂದೆ ಕರ್ತವ್ಯ ಪಥ್ ಎಂದು ಕರೆಯಬೇಕಾಗುತ್ತದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಜ್ ಪಥ್ ಮತ್ತು ಸೆಂಟ್ರಲ್ ವಿಸ್ತಾ ಲಾನ್ಸ್ ಅನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಬ್ರಿಟಿಷರ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಚಿಹ್ನೆಗಳನ್ನು ಮರೆಯಾಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಯಕ್ಕೆ ಅನುಗುಣವಾಗಿ ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಲಾಗಿತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ವಿಸ್ತಾರವನ್ನು ಇನ್ನುಮುಂದೆ ಕರ್ತವ್ಯ ಪಥ್ ಎಂದು ಕರೆಯಲಾಗುತ್ತದೆ. ಆಗಸ್ಟ್ 15 ರಂದು ಕೆಂಪು ಕೋಟೆಯ ಆವರಣದಿಂದ ಮಾಡಿದ ಭಾಷಣದಲ್ಲಿ, ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆಗೆ ಪ್ರಧಾನಿ ಮೋದಿ ಒತ್ತು ನೀಡಿದ್ದರು.
ಅದರಂತೆ, ಕಳೆದ ವಾರ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ ಎಸ್ ವಿಕ್ರಾಂತ್ ಉಡಾವಣೆ ಸಂದರ್ಭದಲ್ಲಿ ನೌಕಾಪಡೆಯು ತನ್ನ ಧ್ವಜವನ್ನು ಬದಲಾಯಿಸಿತು. ಈ ಹಿಂದೆ ಪ್ರಧಾನಿ ನಿವಾಸವಿರುವ ರಸ್ತೆಯ ಹೆಸರನ್ನು ರೇಸ್ ಕೋರ್ಸ್ ರಸ್ತೆಯಿಂದ ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿತ್ತು.
ಇದೀಗ ರಾಜ್‌ಪಥ್ ಅನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ಸೆಪ್ಟೆಂಬರ್ 7 ರಂದು ನ್ಯೂ ಡೆಲ್ಲಿ ಮುನಿಸಿಪಲ್ ಕೌನ್ಸಿಲ್ ವಿಶೇಷ ಸಭೆಯನ್ನು ಕರೆದಿದೆ ಎಂದು ಮೂಲಗಳು ತಿಳಿಸಿವೆ.