ಚೆನ್ನೈ: ಸದ್ಯ ಭಾರತದಲ್ಲಿ ಮದುವೆ ಸೀಸನ್ ನಡೆಯುತ್ತಿದ್ದು, ಮದುವೆ ಸಮಾರಂಭದ ಅಸಂಖ್ಯಾತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುತ್ತಿವೆ. ಅವುಗಳಲ್ಲಿ ಒಂದಷ್ಟು ಫೋಟೋ ಮತ್ತು ವಿಡಿಯೋಗಳು ನೋಡುಗರ ಮುಖದಲ್ಲಿ ನಗು ಅರಳಿಸಿದರೆ, ಇನ್ನೊಂದಿಷ್ಟು ನೋಡುಗರ ಹೃದಯ ಮುಟ್ಟುತ್ತದೆ ಮತ್ತು ಭಾವುಕರನ್ನಾಗಿಸುತ್ತದೆ.
ಇತ್ತೀಚೆಗೆ ನಡೆದ ಮದುವೆ ಒಂದರಲ್ಲಿ ವಧು ಮತ್ತು ವರನ ಸ್ನೇಹಿತರು ಮಾಡಿದ ಒಂದು ಕೆಲಸ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ತಮಿಳುನಾಡಿನ ಮದುರೈ ಸಮೀಪ ನಡೆದ ವಿವಾಹ ಸಮಾರಂಭವೊಂದರಲ್ಲಿ ಆಸಕ್ತಿದಾಯಕ ಘಟನೆ ನಡೆದಿದೆ. ವರನ ಸ್ನೇಹಿತರು ವಧುವಿನ ಬಳಿಕ ಒಂದು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಮದುವೆಯ ಬಳಿಕವೂ ಸ್ನೇಹಿತನಿಗೆ ಕ್ರಿಕೆಟ್ ಆಡಲು ಅವಕಾಶ ನೀಡಬೇಕೆಂದು ವಧುವಿನ ಬಳಿ ಬಾಂಡ್ ಪೇಪರ್ ಮೇಲೆ ಬರೆಸಿಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಹೆಚ್ಚಿನ ಪುರುಷರಿಗೆ ಜೀವನದಲ್ಲಿ ಮೋಜು ಕ್ರಮೇಣ ಮರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸ್ನೇಹಿತರ ಜೊತೆ ಕ್ರಿಕೆಟ್ ಆಡಲೂ ಸಾಧ್ಯವಾಗದ ಮಟ್ಟಿಗೆ ಸಮಯ ಬದಲಾಗುತ್ತದೆ. ಹೀಗಾಗಿ ಸ್ನೇಹಿತರು ಸೇರಿ ಬಾಂಡ್ ಪೇಪರ್ ಮೇಲೆ ಸಮಯ ಕೊಡಬೇಕೆಂದು ಬರೆಸುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.
ಹರಿ ಪ್ರಸಾದ್ ಎಂಬುವವರು ಮಧುರೈ ಜಿಲ್ಲೆಯ ಉಸಿಲಂಪಟ್ಟಿಯ ಕೀಲಾ ಪುದೂರು ನಿವಾಸಿ. ಥೇಣಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಶ್ರೇಷ್ಠ ಕ್ರಿಕೆಟ್ ಆಟಗಾರರೂ ಹೌದು. ಅವರು ಸ್ಥಳೀಯ ಕ್ಲಬ್ 'ಸೂಪರ್ ಸ್ಟಾರ್ ಕ್ರಿಕೆಟ್ ತಂಡ'ದ ನಾಯಕರಾಗಿದ್ದಾರೆ. ಹರಿಪ್ರಸಾದ್ ಸೆ. 9ರಂದು ಥೇಣಿ ಮೂಲದ ಪೂಜಾರನ್ನು ಉಸಿಲಂಪಟ್ಟಿಯ ಖಾಸಗಿ ಮದುವೆ ಮಂಟಪದಲ್ಲಿ ವಿವಾಹವಾದರು.
ಈ ಮದುವೆ ಸಂದರ್ಭದಲ್ಲಿ ವರನ ಸ್ನೇಹಿತರು ಬಾಂಡ್ ಪೇಪರ್ನೊಂದಿಗೆ ಆಗಮಿಸಿದರು. ಮದುವೆಯ ನಂತರವೂ ಹರಿ ಪ್ರಸಾದ್ಗೆ ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಪೂಜಾ ಬಳಿ ಮನವಿ ಮಾಡಿದ್ದಾರೆ. ಮದುವೆಯ ನಂತರವೂ ಶನಿವಾರ ಮತ್ತು ಭಾನುವಾರದಂದು ವರನಿಗೆ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ವಧು ಬಾಂಡ್ ಪೇಪರ್ಗೆ ಸಹಿ ಹಾಕಿದ್ದಾರೆ.
ಈ ವಿನೂತನ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಐಡಿಯಾನು ಒಂಥರಾ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.