ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿ ಯುವಕನೊಬ್ಬ ಮಾಡಿದ ಹೈಡ್ರಾಮಕ್ಕೆ ಪೊಲೀಸರು ಮತ್ತು ಸ್ಥಳೀಯ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಲ್ಲದೆ, ಕೊನೆಯಲ್ಲಿ ಯುವಕ ಕೊಟ್ಟ ರೋಚಕ ಟ್ವಿಸ್ಟ್ಗೆ ಅದೇ ಜನರು ಮತ್ತು ಪೊಲೀಸರು ತಬ್ಬಿಬ್ಬಾದ ಪ್ರಸಂಗ ಜರುಗಿದೆ.
ವಿವರಣೆಗೆ ಬರುವುದಾದರೆ, ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಅಲತಿಯೂರು ಸಮೀಪದ ಆಲಿಂಗಲ್ ಎಂಬಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಪೊನ್ನಾನಿಯಿಂದ ಕೂಟಾಯಿ ಕಡೆಗೆ ತೆರಳುತ್ತಿದ್ದರು. ಅವರು ಚಮ್ರವಟ್ಟಂ ಜಂಕ್ಷನ್‌ಗೆ ಬಂರುತ್ತಿದ್ದಂತೆ ಓರ್ವ ಯುವಕ ಬ್ಯಾಗ್‌ನೊಂದಿಗೆ ಲಿಫ್ಟ್‌ಗೆ ವಿನಂತಿಸಿದನು. ತಕ್ಷಣ ಬೈಕ್ ನಿಲ್ಲಿಸಿದ ಸವಾರ, ಯುವಕನಿಗೆ ಲಿಫ್ಟ್ ನೀಡಿದರು. ಆದರೆ, ದಾರಿಯುದ್ದಕ್ಕೂ ಆತನ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಬೈಕ್ ಸವಾರ, ಯುವಕನ್ನು ಆಲಿಂಗಲ್ನಲ್ಲಿ ಇಳಿಸಿ ಪೊನ್ನಾನಿ ಪೊಲೀಸರಿಗೆ ತಕ್ಷಣ ವಿಷಯ ತಿಳಿಸಿದರು.
ಯಾವಾಗ ಪೊಲೀಸರು ಸ್ಥಳಕ್ಕೆ ಆಗಮಿಸಿದರೋ ಯುವಕ, ಬ್ಯಾಗ್‌ನಿಂದ ಬಂದೂಕು ತೆಗೆದು ಪೊಲೀಸರಿಗೆ ಗದರಿಸಿ, ಆಟೋ ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ. ಆ ಸನ್ನಿವೇಶವನ್ನು ನೋಡಿದ ಸ್ಥಳೀಯರು ಮತ್ತು ನೋಡುಗರು ಭಯಭೀತರಾದರು. ಇತ್ತ ಪೊಲೀಸರು ನೋಡೇ ಬಿಡೋಣ ಅಂತಾ ಭಾರೀ ರಕ್ಷಣೆಯೊಂದಿಗೆ ಯುವಕನ ಕಡೆಗೆ ಮುನ್ನುಗ್ಗಿದರು. ಅಂತಿಮವಾಗಿ ಆ ಸ್ಥಳದಲ್ಲಿ ಪೊಲೀಸರು ಮತ್ತು ಯುವಕನ ನಡುವೆ ಕಿತ್ತಾಟವಾಯಿತು ಮತ್ತು ಯುವಕನ ಪ್ರಯತ್ನವು ವಿಫಲವಾಯಿತು.
ಆದರೆ, ಇಡೀ ಪ್ರಕರಣದಲ್ಲಿ ಕೊನೆಯಲ್ಲಿ ರೋಚಕವಾದ ಟ್ವಿಸ್ಟ್ ಒಂದು ಕಾದಿತ್ತು. ಅದೇನೆಂದರೆ, ಯುವಕನು ತೋರಿದ ಬಂದೂಕು ಅಧಿಕೃತ ಬಂದೂಕು ಆಗಿರಲಿಲ್ಲ. ಅದೊಂದು ಆಟಿಕೆ ಬಂದೂಕು ಆಗಿತ್ತು. ಅಲ್ಲದೆ, ಯುವಕ ಮಾನಸಿಕವಾಗಿಯೂ ಅಸ್ವಸ್ಥ ಎಂಬುದು ಬೆಳಕಿಗೆ ಬಂದಿತು. ಬಳಿಕ ಯುವಕನ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಯುವಕನನ್ನು ಅವರ ಜೊತೆಗೆ ಕಳುಹಿಸಲಾಯಿತು. ಈ ಮಾಹಿತಿ ತಿಳಿದ ಸ್ಥಳೀಯರು ತಬ್ಬಿಬ್ಬಾಗಿ, ನಕ್ಕು ಸುಮ್ಮನಾದರು.