ಬದಿಯಡ್ಕ: ಗಡಿನಾಡುಗಳ ಭಾಷಾ ವೈವಿಧ್ಯತೆ, ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯ ಪ್ರಭಾವ ಜೊತೆಗೆ ಭಾಷೆಯ ಬಳಕೆಯ ಬಗೆಗಿನ ಮುಲಾಜಿಲ್ಲದ ಹೆಡ್ಡುತನಗಳು ಹಲವೊಮ್ಮೆ ಕಳವಳದ ನಡುವೆಯೂ ನಗೆ ತರಿಸುತ್ತದೆ.
ಬದಿಯಡ್ಕ ಪೇಟೆಯಲ್ಲಿ ಹಲವು ದಶಕಗಳಿಂದ ಪ್ರತಿ ಶನಿವಾರ ಸಂತೆ ಮಾರುಕಟ್ಟೆ ವ್ಯವಸ್ಥೆ ಜನಜನಿತವಾಗಿ ನಡೆಯುತ್ತಿದೆ. ಪೇಟೆಯ ಪಕ್ಕದಲ್ಲಿ ಪೋಲೀಸ್ ಠಾಣೆಯ ಸಮೀಪ ಕುಂಬಳೆ ರಸ್ತೆಗೆ ತಾಗಿಕೊಂಡಿರುವ ಖಾಲಿ ಸ್ಥಳದಲ್ಲಿ ಸೂಜಿಯಿಂದ ತೊಡಗಿ ಕರ್ಪೂರದ ವರೆಗೂ ತರಹೇವಾರಿ ವಸ್ತುಗಳನ್ನು ಮಾರಾಟಮಾಡಲು ಕರ್ನಾಟಕ ಸಹಿತ ವಿವಿಧೆಡೆಗಳಿಂದ ವ್ಯಾಪಾರಿಗಳ ದಂಡೇ ಆಗಮಿಸುತ್ತದೆ.
ಈವಾರದ ಸಂತೆಗೆ ಕೇರಳದ ಹಬ್ಬ ಓಣಂನ ಹೆಸರನ್ನು ವಿಶೇಷವಾಗಿ ಇರಿಸಲಾಗಿದ್ದು, ಆದರೆ ಅಲ್ಲಿ ಅಳವಡಿಸಲಾಗಿದ್ದ ಫಲಕ ಗಮನ ಸೆಳೆಯಿತು. ಓಣಂ ಸಂತೆ ಎಂಬುದರ ಬದಲಿಗೆ ಒಣ ಸಂತೆ ಒಂದೆ ಮುದ್ರಿಸಿರುವುದು(ಚಿತ್ರದಲ್ಲಿ ಗಮನಿಸಿ) ಹಲವರ ಹುಬ್ಬೇರಿಸುವಂತೆ ಮಾಡಿದ್ದು ನಿಜ. ಕೋವಿಡ್ ಬಳಿಕದ ನಿಸ್ತೇಜ ಆರ್ಥಿಕತೆ, ವ್ಯವಹಾರಗಳ ಕುಸಿತದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈಬಾರಿಯ ಓಣಂ ಒಂದರ್ಥದಲ್ಲಿ ಒಣ ಆಚರಣೆಯೇ ಆಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಜನರು ದೈನಂದಿನ ವ್ಯವಹಾರದಲ್ಲಿ ಆಲೋಚಿಸಿ ನಿರ್ವಹಿಸಬೇಕಾದ ಸ್ಥಿತಿಯಿದ್ದು, ಈ ಮಧ್ಯೆ “ಒಣ ಸಂತೆ” ನಿಜವಾಗಿಯೂ ಹೌದು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಕನ್ನಡ ಭಾಷಿಗರ ಮೇಲೆ ಆಗುತ್ತಿರುವ ಭಾಷಾಪರವಾದ ಇಂತಹ ಹೊಡೆತಗಳು ಹಲವು. ವರ್ಷಗಳ ಹಿಂದೆ ಚೆರ್ಕಳ ಪೇಟೆಯೊಂದರ ಅಂಗಡಿ ನಾಮಫಲಕ ಹೊಲ್ಲೆ ಮನೆ-ಹೊಲ್ಲೆ ಹಂಚು(ಒಳ್ಳೆಯ ಮನೆಗೆ ಉತ್ತಮ ಹಂಚು ಬಳಸಿ ಎಂಬ ಅರ್ಥ)ಎಂಬ ನಾಮಫಲಕ ಹಲವು ವರ್ಷ ರಾರಾಜಿಸುತ್ತಿತ್ತು. ಬಳಿಕ ಆ ಅಂಗಡಿ ಮುಚ್ಚುಗಡೆಯಾಗುವುದರೊಂದಿಗೆ ಅನರ್ಥ ನಾಮಫಲಕಕ್ಕೂ ಮುಕ್ತಿ ಸಿಕ್ಕಿತು.