ದುಬೈ: ಸೌದಿ ದೊರೆ ಸಲ್ಮಾನ್ ಅವರು ತಮ್ಮ ಪುತ್ರ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ದೇಶದ ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
MBS ಎಂಬ ಸಂಕ್ಷಿಪ್ತ ರೂಪದಿಂದ 37 ವರ್ಷದ ಕ್ರೌನ್ ಪ್ರಿನ್ಸ್, ಚಿರಪರಿಚಿತರಾಗಿದ್ದಾರೆ. ಮಂಗಳವಾರ ಸಂಪುಟ ಪುನಾರಚನೆ ಮಾಡಿರುವ ಸೌದಿ ದೊರೆ ಸಲ್ಮಾನ್, ತನ್ನ ಇನ್ನೊಬ್ಬ ಪುತ್ರ ಖಾಲಿದ್ ಬಿನ್ ಸಲ್ಮಾನ್ ಅವರನ್ನು ನೂತನ ರಕ್ಷಣಾ ಸಚಿವರಾಗಿ ನೇಮಕ ಮಾಡಿದ್ದಾರೆ. ಅವರು ಈ ಹಿಂದೆ ಉಪ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿತ್ತ, ವಿದೇಶಾಂಗ ಹಾಗೂ ಹೂಡಿಕೆ ಸಚಿವರು ಬದಲಾಗಿಲ್ಲ. ಇನ್ನು ಸಂಪುಟದ ಉಸ್ತುವಾರಿ ನೂತನ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರದ್ದಾಗಲಿದೆ. ಮೊಹಮ್ಮದ್ ಬಿನ್ ಸಲ್ಮಾನ್ ಅಕಾ ಎಂಬಿಎಸ್ ಸದ್ಯ ಸೌದಿ ಅರೇಬಿಯಾ ರಾಜಕೀಯದಲ್ಲಿ ಬಹಳ ಪ್ರಭಾವಿ ವ್ಯಕ್ತಿ ಎನಿಸಿದ್ದವರು. ಹಲವು ವರ್ಷಗಳ ಕಾಲ ಆಡಳಿತ ವ್ಯವಹಾರದಲ್ಲಿ ಅವರೇ ಅಂತಿಮ ಎನ್ನುವಷ್ಟು ಪ್ರಭಾವಿಯಾಗಿದ್ದರು.
ಸೌದಿ ಅರೇಬಿಯಾದಲ್ಲಿ ದೊರೆಯಾದವರೇ ಸಾಮಾನ್ಯವಾಗಿ ಪ್ರಧಾನಿ ಸ್ಥಾನ ನಿರ್ವಹಿಸುವುದುಂಟು. ಈವರೆಗೂ ಸಲ್ಮಾನ್ ಅವರೇ ಪ್ರಧಾನಿಯಾಗಿದ್ದರು. ಈಗ ತಮ್ಮ ಏಳನೇ ಮಗನಾದ ಮೊಹಮ್ಮದ್ ಬಿನ್ ಸಲ್ಮಾನ್‌ರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿರುವುದು ಕುತೂಹಲ ಮೂಡಿಸಿದೆ. ಎಂಬಿಎಸ್ ಅವರು ಸೌದಿ ಅರೇಬಿಯಾ ಮಹಾರಾಜ ಸಲ್ಮಾನ್‌ನ ಉತ್ತರಾಧಿಕಾರಿಯೂ ಹೌದು. ಸದ್ಯದಲ್ಲೇ ದೊರೆ ಪಟ್ಟವನ್ನೂ ಎಂಬಿಎಸ್‌ಗೆ ಬಿಟ್ಟುಕೊಡಬಹುದಾ ಎಂಬ ಅನುಮಾನ ಇದೆ.
ಕ್ರೌನ್ ಪ್ರಿನ್ಸ್ ಮೊಹಮ್ಮದ್ 2017 ರಲ್ಲಿ ಅಧಿಕಾರಕ್ಕೆ ಏರಿದಾಗಿನಿಂದ ಸೌದಿ ಅರೇಬಿಯಾವನ್ನು ಆಮೂಲಾಗ್ರವಾಗಿ ಬದಲಾಯಿಸಿದ್ದಾರೆ. ತೈಲದ ಮೇಲಿನ ಅವಲಂಬನೆಯಿಂದ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಪ್ರಯತ್ನಗಳನ್ನು ಮುನ್ನಡೆಸಿದ್ದಾರೆ. ಆರ್ಥಿಕತೆಯನ್ನು ಪರಿವರ್ತಿಸಲು ಮತ್ತು ತೈಲದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ವಿಷನ್ 2030 ಹಮ್ಮಿಕೊಂಡಿದೆ ಸೌದಿ ಅರೆಬಿಯಾ.