ಉಪ್ಪಳ: ಬಂಟರ ಸಂಘದ ಚಟುವಟಿಕೆಗಳಲ್ಲಿ ಸಮಾಜ ಬಾಂಧವರು ಸಕ್ರಿಯಗೊಳ್ಳುವ ಮೂಲಕ ಸಂಘಟನೆ ಬಲಪಡಿಸಲು ಸಹಕರಿಸಬೇಕೆಂದು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರಿನ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕರೆನೀಡಿದರು.
ಕಾಸರಗೋಡು ಜಿಲ್ಲಾ ಬಂಟರ ಸಂಘದ ವತಿಯಿಂದ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ಉಪ್ಪಳದ ರಾಮಕೃಷ್ಣ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣೆ, ಪ್ರತಿಭಾ ಪುರಸ್ಕಾರ, ನಾಡೋಜ ಕಯ್ಯಾರ ಪ್ರಶಸ್ತಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಎಂ.ಆರ್.ಪಿ.ಎಲ್ ನ ಪ್ರಧಾನ ಪ್ರಬಂಧಕಿ ವೀಣಾ ಟಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಬಂಟ ಮಹಿಳೆಯರು ಸಂಘದ ಕಾರ್ಯಕ್ರಮಗಳಲ್ಲಿ ಪೂರ್ಣ ಸಹಭಾಗಿಗಳಾಗುವ ಮೂಲಕ ಹಿರಿಯರು ಹಾಕಿಕೊಟ್ಟ ಪರಂಪರೆ, ಆಚಾರ ವಿಚಾರ, ಅನುಷ್ಠಾನಗಳನ್ನು ಅರಿತು ಮುಂದಿನ ತಲೆಮಾರಿಗೆ ದಾಟಿಸಲು ನೆರವಾಗುತ್ತದೆ ಎಂದರು.
ಈಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಎ.ಸದಾನಂದ ರೈ, ಉದ್ಯಮಿ ಮಧುಕರ ರೈ ಕೊರೆಕ್ಕಾನ, ಕಾಸರಗೋಡು ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಕೆ.ಸುಬ್ಬಣ್ಣ ಆಳ್ವ, ಕುಂಬಳೆ ಫಿರ್ಕಾ ಬಂಟರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಸದಾನಂದ ಸುಲಾಯ, ಮಂಗಳೂರು ಬಂಟರ ಸಂಘದ ವಿದ್ಯಾರ್ಥಿ ನಿಲಯ ಅಮೃತೋತ್ಸವ ಸಮಿತಿ ಸಂಚಾಲಕಿ ಸವಿತಾ ರೈ ಮತ್ತು ಸವಿತಾ ಪೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಈಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ರೈ ಕಯ್ಯಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರುಗಳಾದ ಚಂದ್ರಹಾಸ ರೈ ಪಿ.ಜಿ., ಶ್ಯಾಮಲಾ ಎಂ.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರ್, ಕಿರಣ್ ಮಾಡ ಪ್ರತಿಭಾನ್ವಿತರ ಬಗ್ಗೆ ಮಾತನಾಡಿದರು. ನಿರಂಜನ ರೈ ಪೆರಡಾಲ ಮತ್ತು ರವೀಂದ್ರ ರೈ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಚಿದಾನಂದ ಆಳ್ವ ವಂದಿಸಿದರು.