ತಿರುವನಂತಪುರ: 'ಭಾರತವನ್ನು ಜೋಡಿಸುವ ಹಾಗೂ ಕಾಂಗ್ರೆಸನ್ನು ಒಂದಾಗಿಸುವ ಎರಡೂ ಉದ್ದೇಶಗಳು 'ಭಾರತ್ ಜೋಡೊ' ಯಾತ್ರೆ ಮೂಲಕ ಈಡೇರಲಿವೆ' ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಮಂಗಳವಾರ ಇಲ್ಲಿ ಹೇಳಿದ್ದಾರೆ.
'ದೇಶದ ಉದ್ದಗಲಕ್ಕೂ ನಡೆಯುವ ಭಾರತ್ ಜೋಡೊ ಯಾತ್ರೆಯು ಪಕ್ಷದ ಮೌಲ್ಯಗಳು ಹಾಗೂ ಆದರ್ಶಗಳೊಂದಿಗೆ ಮುಖಂಡರನ್ನು ಒಂದುಗೂಡಿಸುವುದು' ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ತರೂರ್ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಹಲವು ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದರಿಂದ ಪಕ್ಷದ ಮತದಾರರಿಗೆ ಹೆಚ್ಚು ಆಯ್ಕೆ ಸಿಕ್ಕಂತಾಗಲಿದೆ' ಎಂದರು.
'ಭಾರತವನ್ನು ಒಂದುಗೂಡಿಸುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್. ಒಂದು ವೇಳೆ, ದೇಶದ ಜನರು ಈ ಸಂದೇಶದಿಂದ ಪ್ರೇರಣೆ ಪಡೆದಿದ್ದೇ ಆದಲ್ಲಿ, ಪಕ್ಷದ ಪುನರುತ್ಥಾನಕ್ಕೆ ನಾಂದಿ ಹಾಡಿದಂತಾಗುವುದು' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
'ಭಾರತ್ ಜೋಡೊ ಬದಲು ಕಾಂಗ್ರೆಸ್ ಜೋಡೊ ಯಾತ್ರೆ ನಡೆಸಬೇಕು' ಎಂಬ ಪಕ್ಷದ ಮಾಜಿ ಮುಖಂಡ ಗುಲಾಂ ನಬಿ ಆಜಾದ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ತರೂರ್, 'ಗುಲಾಂ ನಬಿ ಆಜಾದ್ ಅವರು ಒಬ್ಬ ಗೌರವಾನ್ವಿತ ನಾಯಕ. ಅವರ ನಿರ್ದಿಷ್ಟ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ' ಎಂದರು.