ಕಾಸರಗೋಡು: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಕೇಂದ್ರ ಪುರಾತತ್ವ ಇಲಾಖೆ ಸಹಯೋಗದಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆಯ ಅನುಮೋದಿತ ಮಾರ್ಗದರ್ಶಕ ನಿರ್ಮೇಶ್ ಕುಮಾರ್ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಜಂಟಿ ಮಾರ್ಗದರ್ಶನದಲ್ಲಿ ನಡೆಸಿದ ಪಾರಂಪರಿಕ ನಡಿಗೆ ವಿಶಿಷ್ಟ ಅನುಭವ ನೀಡಿತು.
ಇತಿಹಾಸ ತಜ್ಞ ಡಾ.ಸಿ.ಬಾಲನ್ ಪಾರಂಪರಿಕ ನಡಿಗೆಯ ನೇತೃಥ್ವ ವಹಿಸಿದ್ದರು. 100ಕ್ಕೂ ಹೆಚ್ಚು ಪ್ರವಾಸೋದ್ಯಮ ವಿಭಾಗ ವಿದ್ಯಾರ್ಥಿಗಳೊಂದಿಗೆ ಡಾ.ಸಿ.ಬಾಲನ್ ಸಂವಾದ ನಡೆಸಿದರು. ಮೂವತ್ತು ಎಕರೆ ವಿಸ್ತಾರವಾಗಿರುವ ಬೇಕಲ ಕೋಟೆಯ ಇತಿಹಾಸವನ್ನು ನಡಿಗೆ ಮೂಲಕ ಪರಿಚಯಿಸಲಾಯಿತು. ಇಕ್ಕೇರಿ ರಾಜವಂಶದ ಹಿರಿಯ ವೆಂಕಟಪ್ಪ ನಾಯ್ಕರಿಂದ ಆರಂಭಿಸಿ ಮೈಸೂರಿನ ಅರಸರು ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಭಾಗವಾದ ಬಗೆಯನ್ನು ಡಾ.ಸಿ.ಬಾಲನ್ ವಿವರವಾಗಿ ವಿವರಿಸಿದರು. ಸ್ವಾತಂತ್ರ್ಯದ ನಂತರ 1956ರ ಭಾಷಾವಾರು ಪ್ರಾಂತ ರಚನೆ ನಂತರ ಕೋಟೆ ಕೇರಳ ರಾಜ್ಯದ ಪಾಲಾಗಿದೆ.
1992 ರಲ್ಲಿ ಕೇಂದ್ರ ಸರ್ಕಾರವು ಕೇರಳದ ಏಕೈಕ ವಿಶೇಷ ಪ್ರವಾಸೋದ್ಯಮ ವಲಯ ಎಂದು ಘೋಷಿಸಿದ ನಂತರ, ಇದು ದೇಶದ ಪ್ರಮುಖ ಕರಾವಳಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ಹೊಸ ತಲೆಮಾರಿಗೆ ಇತಿಹಾಸದ ಬಗ್ಗೆ ಹೊಸ ಮಾಹಿತಿಯನ್ನು ಒದಗಿಸಿದೆ.
ಬೇಕಲ ಸುತ್ತಮುತ್ತ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ (ಡಿಟಿಪಿಸಿ) ಕಾರ್ಯದರ್ಶಿ ಲಿಜೋ ಜೋಸೆಫ್ ಮಾಹಿತಿ ನೀಡಿದರು.
ಮಂಜೇಶ್ವರ ಗೋವಿಂದಪೈ ಸ್ಮಾರಕ ಸರಕಾರಿ ಕಾಲೇಜು, ಪೆರಿಯಾ ಕೇಂದ್ರೀಯ ವಿಶ್ವವಿದ್ಯಾನಿಲಯ, ಚಟ್ಟಂಚಾಲ್ ಎಂಐಸಿ ಕಾಲೇಜು, ಉದುಮ ಫುಡ್ ಕ್ರಾಫ್ಟ್ ಸಂಸ್ಥೆ ಮತ್ತು ಪೆರಿಯ ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಂ.ಹುಸೇನ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂರಕ್ಷಣಾ ಸಹಾಯಕ ಪಿ.ವಿ.ಶಾಜು, ಬಿಆರ್ ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಪತ್, ಬಿ.ಎಂ.ಸಾದಿಕ್, ಸೈಫುದ್ದೀನ್ ಕಳನಾಡ್ ಉಪಸ್ಥಿತರಿದ್ದರು.
ಪ್ರವಾಸೋದ್ಯಮ ದಿನಾಚರಣೆ: ಬೇಕಲ ಕೋಟೆಯಲ್ಲಿ ವಿಶಿಷ್ಟ ಅನುಭವ ನೀಡಿದ ಪಾರಂಪರಿಕ ನಡಿಗೆ
0
ಸೆಪ್ಟೆಂಬರ್ 27, 2022
Tags