ನವದೆಹಲಿ: ಅಜ್ಞಾತ ಸ್ಥಳದಲ್ಲಿ ಕುಳಿತು ಮೊಬೈಲ್ಗೆ ಅನಪೇಕ್ಷಿತ ಕರೆ, ಸಂದೇಶ, ಇಮೇಲ್ ಮೂಲಕ ಬಹುಮಾನ, ಲಾಟರಿ, ಉಡುಗೊರೆ, ನೌಕರಿ, ಮದುವೆಯ ಆಮಿಷವೊಡ್ಡಿ ಅಮಾಯಕರನ್ನು ವಂಚಿಸುವ ಸೈಬರ್ ಕಳ್ಳತನಕ್ಕೆ ಕಡಿವಾಣ ಬೀಳುವ ಸಮಯ ಕೊನೆಗೂ ಸನ್ನಿಹಿತವಾಗಿದೆ.
ಹೌದು, ಕೇಂದ್ರ ಸರ್ಕಾರ ಹೊಸದಾಗಿ ತರಲು ಉದ್ದೇಶಿಸಿರುವ ಟೆಲಿಕಾಂ ನೀತಿ ಜಾರಿಗೆ ಬಂದಲ್ಲಿ ಸಾರ್ವಜನಿಕರಿಗೆ ಸೈಬರ್ ಕಳ್ಳರ ಗಾಳಕ್ಕೆ ಬೀಳದಂತೆ ರಕ್ಷಣೆ ಒದಗಿಸಲಿದೆ.
ಎನ್ಸಿಆರ್ಬಿ ಪ್ರಕಾರ 2021ನೇ ಸಾಲಿನಲ್ಲಿ ದೇಶದ ಮಹಾನಗರಗಳಲ್ಲಿ ಸೈಬರ್ ವಂಚನೆ ಜಾಸ್ತಿಯಾಗಿದೆ. ಅದರಲ್ಲೂ ಬೆಂಗಳೂರು ನಗರ (6,423 ಪ್ರಕರಣ) ಮೊದಲ ಸ್ಥಾನದಲ್ಲಿದೆ. 2 ಮತ್ತು 3ನೇ ಸ್ಥಾನದಲ್ಲಿ ಹೈದರಾಬಾದ್ (3,303 ಕೇಸ್) ಮತ್ತು ಮುಂಬೈ (2883 ಕೇಸು) ಇವೆ. ಆರ್ಬಿಐ, ಆದಾಯ ತೆರಿಗೆ ಇಲಾಖೆ, ಪ್ರತಿಷ್ಠಿತ ವಾಣಿಜ್ಯ ಕಂಪನಿಗಳ ಹೆಸರಿನಲ್ಲಿ ಅಪರಿಚಿತ ಸಂದೇಶಗಳನ್ನು ಮೊಬೈಲ್ಗೆ ಕಳುಹಿಸಿ ಲಿಂಕ್ ಒತ್ತಿ ಮಾಹಿತಿ ಅಪ್ಡೇಟ್ ಮಾಡುವಂತೆ ಸೂಚಿಸುತ್ತಾರೆ. ಕೆಲ ಸಂದೇಶಗಳಲ್ಲಿ ಬ್ಯಾಂಕ್ ಮಾಹಿತಿ ಅಪ್ಡೇಟ್, ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ಕೆವೈಸಿ ಅಪ್ಡೇಟ್, ಬಹುಮಾನ ಬಂದಿದೆ, ತೆರಿಗೆ ಪಾವತಿ ಇನ್ನಿತರ ಸಂದೇಶಗಳನ್ನು ಕಳುಹಿಸಿ ವಂಚಿಸಲಾಗುತ್ತಿದೆ. ಸಂದೇಶ ಎಲ್ಲಿಂದ ಬಂದಿದೆ? ಯಾರು ಕಳುಹಿಸಿದ್ದಾರೆ? ಅಧಿಕೃತ ಕಚೇರಿ ಅಥವಾ ಕಂಪನಿ ಮಾಹಿತಿ ಬಯಸಿದೆಯಾ ಎಂಬುದೂ ತಿಳಿಯುವುದಿಲ್ಲ. ಇಂತಹ ಲಿಂಕ್ ಮೇಲೆ ಸಾರ್ವಜನಿಕರು ಕ್ಲಿಕ್ ಮಾಡಿ ಬ್ಯಾಂಕ್ ಖಾತೆ ಖಾಲಿ ಮಾಡಿಕೊಳ್ಳುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇಂಥ ಅಪರಾಧಗಳಿಗೆ ಇತಿಶ್ರೀ ಹೇಳುವ ಹಾಗೂ ಓವರ್ ದಿ ಟಾಪ್ (ಒಟಿಸಿ) ಆಪ್ಗಳಿಗೊಂದು ನಿಬಂಧಕ ಮಾರ್ಗಸೂಚಿ ರೂಪಿಸುವ ನಿಟ್ಟಿಯಲ್ಲಿ ನೂತನ ದೂರ ಸಂಪರ್ಕ ನೀತಿ ಸಿದ್ಧಗೊಳ್ಳುತ್ತಿದೆ.
ಹೊಸ ನೀತಿ: ನೂತನ ದೂರಸಂಪರ್ಕ ನೀತಿಯಲ್ಲಿ, ಸ್ಪ್ಯಾಮ್ ಕರೆ, ವಂಚಕರ ಸಂದೇಶಗಳ ಕಡಿವಾಣಕ್ಕೆ ಕಠಿಣ ನಿಯಮಗಳನ್ನು ರೂಪಿಸಲಾಗುವುದು. ಇದರಿಂದ ಗ್ರಾಹಕರು ಎದುರಿಸುತ್ತಿರುವ ಕಿರಿಕಿರಿಗೆ ಪರಿಹಾರ ದೊರೆಯಲಿದೆ. ಕಮ್ಯುನಿಕೇಷನ್ ಆಪ್ಗಳಾದ ಫೇಸ್ಬುಕ್, ವಾಟ್ಸ್ಆಪ್, ಟೆಲಿಗ್ರಾಮ್ ಸಿಗ್ನಲ್ ಮೊದಲಾದವುಗಳು ಕೂಡ ಈ ನೀತಿಯಡಿ ಬರಲಿವೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸು ಸಾಕಾರವಾಗಲು ದೂರಸಂಪರ್ಕ ಪ್ರವೇಶ ದ್ವಾರವಾಗಿದೆ. ಇದು ಹಂತ ಹಂತವಾಗಿ ಗುರಿಯತ್ತ ಕೊಂಡೊಯ್ಯುತ್ತದೆ. ಗ್ರಾಹಕರಿಗೆ ತೊಂದರೆ ಆಗುವಂತಹ ಕರೆಗಳನ್ನು ನಿಯಂತ್ರಿಸಲು ಅಗತ್ಯವಿದ್ದ ಕಡೆ ಕಠಿಣ ನಿಯಮ ರೂಪಿಸಲಾಗುವುದು. ಉಳಿದಂತೆ ನಿಯಮಗಳು ಸರಳವಾಗಿರಲಿವೆ. ಯಾರಿಗೂ ತೊಂದರೆ ಆಗದಂತೆ ಬಳಕೆದಾರರ ಹಿತರಕ್ಷಣಾ ಕಾಯ್ದೆ ಇದಾಗಿರಲಿದೆ ಎಂದು ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳ ಸಚಿವರೂ ಆಗಿರುವ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಸೂದೆಯ ಅಂತಿಮ ಕರಡು ಸಿದ್ಧಗೊಳಿಸುವುದಕ್ಕೂ ಮುನ್ನ ಸಂಬಂಧಿಸಿದವರ ಅಭಿಪ್ರಾಯ ಕೋರಲಾಗಿದೆ. ಕಮ್ಯುನಿಕೇಷನ್ ಆಪ್ಗಳು ಬಳಸುವ ತರಂಗಗಳು ಟೆಲಿಕಾಂ ಮಸೂದೆಯ ವ್ಯಾಪ್ತಿಗೆ ಬರಲಿವೆ. ಒಟಿಟಿ, ಸಂವಹನ ಸೇವೆ, ದೂರಸಂಪರ್ಕ ಸೇವೆಯ ಗುರುತಿಸುವಿಕೆಗಳನ್ನು ಈ ಮಸೂದೆ ಒಳಗೊಂಡಿರಲಿದೆ. ಕೆವೈಸಿ ಮತ್ತು ಡಿಎನ್ಡಿ ಅವಕಾಶಗಳನ್ನು ಮಸೂದೆ ಸ್ಪಷ್ಟವಾಗಿ ಗುರುತಿಸಲಿದೆ. ನಿಸ್ತಂತು ಸಾಧನಗಳಿಗೆ ಪರವಾನಗಿ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದರು.
ಹೆಚ್ಚುವರಿ ಪರವಾನಗಿ ಅಗತ್ಯ: ಕರೆ ಮತ್ತು ಸಂದೇಶ ಸೇವೆಗಳನ್ನು ಒದಗಿಸುವ ವಾಟ್ಸ್ಆಪ್, ಝುೂಮ್ ಸ್ಕೈಪ್, ಫೇಸ್ಬುಕ್ ಮೆಸೆಂಜರ್, ಟೆಲಿಗ್ರಾಮ್ ಮೈಕ್ರೋಸಾಫ್ಟ್ ಟೀಮ್್ಸ, ಗೂಗಲ್ಗಳು ಭಾರತದಲ್ಲಿ ಕಾರ್ಯನಿರ್ವಹಿಸಬೇಕಿದ್ದರೆ ಹೆಚ್ಚುವರಿ ಪರವಾನಗಿ ಪಡೆಯಬೇಕಾಗುತ್ತದೆ ಎಂದು ವೈಷ್ಣವ್ ತಿಳಿಸಿದರು.
ಬ್ಯಾಂಕ್ಗಳಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಗ್ರಾಹಕರ ಹಣಕಾಸು ಮಾಹಿತಿ ಪಡೆದುಕೊಂಡು ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಅಪರಿಚಿತ ಸಂಖ್ಯೆಗಳಿಂದ ಬೆದರಿಕೆಯ ಕರೆಗಳೂ ಬರುತ್ತಿವೆ. ಹೀಗಾಗಿ ಗ್ರಾಹಕರಿಗೆ ರಕ್ಷಣೆ ನೀಡುವಂತಹ ಮತ್ತು ಸೈಬರ್ ಅಪರಾಧಗಳನ್ನು ತಡೆಯುವಂತಹ ಮಸೂದೆ ಸಿದ್ಧಗೊಳ್ಳುತ್ತಿದೆ
ಅಶ್ವಿನಿ ವೈಷ್ಣವ್ ದೂರಸಂಪರ್ಕ ಸಚಿವ
ಕರೆ ಮೂಲ ತಿಳಿದುಕೊಳ್ಳಲು ಹಕ್ಕಿದೆ: ವಾಟ್ಸ್ಆಪ್ ಅಥವಾ ಝುೂಮ್ ಯಾವುದೇ ಕರೆ ಇರಲಿ, ಗ್ರಾಹಕರಿಗೆ ತಮಗೆ ಬಂದ ಕರೆ ಎಲ್ಲಿಂದ ಬಂತು ಎಂದು ತಿಳಿದುಕೊಳ್ಳುವ ಹಕ್ಕು ಇದೆ. ಇಂತಹ ಹಕ್ಕನ್ನು ಮಸೂದೆ ಒಳಗೊಳ್ಳಲಿದೆ. ಈ ಬಿಲ್ ಮಂಡನೆಯಾಗಿ ಕಾಯ್ದೆ ಆಗಲು ಆರರಿಂದ 10 ತಿಂಗಳು ಬೇಕಾಗಬಹುದು. ಏಕೆಂದರೆ, ಸಂಬಂಧಿಸಿದವರಿಂದ ಸಲಹೆಗಳನ್ನು ಪಡೆಯುವ ಪ್ರಕ್ರಿಯೆ ಮುಗಿದು, ಅಂತಿಮ ಕರಡು ಸಿದ್ಧವಾಗಬೇಕು. ನಂತರ ಅದಕ್ಕೆ ಸಂಪುಟದ ಒಪ್ಪಿಗೆ ದೊರೆತು ಸಂಸತ್ನಲ್ಲಿ ಮಂಡನೆ ಆಗಬೇಕು ಎಂದು ವೈಷ್ಣವ್ ವಿವರಿಸಿದರು. ಹೊಸ ಮಸೂದೆ ಬರಲಿದೆ ಎಂಬ ಭಯ ಬೇಡ. ಈಗಿರುವ ದೂರಸಂಪರ್ಕದ ನಿಯಮ, ನಿಬಂಧನೆ, ವಿನಾಯಿತಿ, ಪರವಾನಗಿ, ನೋಂದಣಿಗಳಿಗೆ ಯಾವುದೇ ಬಾಧಕವಾಗುವುದಿಲ್ಲ ಮತ್ತು ಕಾಯ್ದೆಯು ಪೂರ್ವಾನ್ವಯವಾಗದು ಎಂದು ವೈಷ್ಣವ್ ಹೇಳಿದರು.
ಹಳೆಯ 3 ಕಾನೂನು ಮಾರ್ಪಾಟು: ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1885ರ ಟೆಲಿಗ್ರಾಫ್ ಕಾಯ್ದೆ, 1932ರ ವೈರ್ಲೆಸ್ ಟೆಲಿಗ್ರಫಿ ಕಾಯ್ದೆ, 1950ರ ಟೆಲಿಗ್ರಾಫ್ ವೈರ್ಸ್ (ಅಕ್ರಮ ಸ್ವಾಧೀನ) ಕಾಯ್ದೆ ಪ್ರಸ್ತುತ ಜಾರಿಯಲ್ಲಿದ್ದು, ಇದರ ಅನುಸಾರವೇ ಇಲಾಖೆ ಕಾರ್ಯನಿವರ್ಹಿಸುತ್ತಿದೆ. ಆದರೆ, ಈಗ ತಂತ್ರಜ್ಞಾನದಲ್ಲಿ ಬಹಳ ಬದಲಾವಣೆಯಾಗಿದೆ. ಹಳೆಯ ಕಾನೂನá-ಗಳಿಂದ ಪ್ರಯೋಜನವಿಲ್ಲ. ಹೀಗಾಗಿ ಇವುಗಳು ಸುಧಾರಣೆ ಗೊಂಡು ನಿರ್ದಿಷ್ಟ ಕಾನೂನಿನ ಚೌಕಟ್ಟು ರೂಪುಗೊಳ್ಳಬೇಕು. ಸ್ಪೆಕ್ಟ್ರಂ ಬಳಕೆಯು ಹೆಚ್ಚು ಪರಿಣಾಮಕಾರಿ ಆಗಬೇಕು. ಈ ನಿಟ್ಟಿನಲ್ಲಿ ಹೊಸ ಮಸೂದೆಯಲ್ಲಿ ಸ್ಪೆಕ್ಟ್ರಮ್ೆ ಸಂಬಂಧಿಸಿದ ಸುಧಾರಣೆಯೂ ಇರಲಿದೆ. ಹಳೆಯ ನಿಬಂಧನೆಗಳನ್ನು ತೆಗೆದ ಮೇಲೆ ದೂರಸಂಪರ್ಕದ ಪ್ರಮುಖ ಅಪರಾಧಗಳು ಮತ್ತು ದೈನಂದಿನ ಬಳಕೆಯಲ್ಲಿ ಆಗುವಂತಹ ಪ್ರಮಾಣಗಳ ಸ್ಪಷ್ಟ ವರ್ಗೀಕರಣ ಇರಲಿದೆ ಎಂದು ವೈಷ್ಣವ್ ಹೇಳಿದ್ದಾರೆ.