ನವದೆಹಲಿ: ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಸೋಮವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಸಾಧ್ಯತೆ ಇದೆ.
ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರಿರುವ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ, ಕಳೆದ ಮಾರ್ಚ್ 10ರಂದು ತೀರ್ಪನ್ನು ಕಾಯ್ದಿರಿಸಿತ್ತು.
'ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 15ರಂದು ಅಥವಾ ಅದಕ್ಕೂ ಮುಂಚಿತವಾಗಿ ಲಿಖಿತವಾಗಿ ಅಹವಾಲು ಸಲ್ಲಿಸಲು ಮಲ್ಯ ಪರ ವಕೀಲ ಅಂಕುರ್ ಸೈಗಲ್ ಅವರಿಗೆ ಕೊನೆಯ ಅವಕಾಶ ನೀಡಲಾಗುವುದು. ಅಹವಾಲಿನ ಒಂದು ಪ್ರತಿಯನ್ನು ಅಮಿಕಸ್ ಕ್ಯೂರಿ ಅವರಿಗೂ ಸಲ್ಲಿಸಬೇಕು' ಎಂದಿದ್ದ ನ್ಯಾಯಪೀಠ, ಶಿಕ್ಷೆಯ ಪ್ರಮಾಣ ಕುರಿತ ಆದೇಶವನ್ನು ಕಾಯ್ದಿರಿಸಿತ್ತು.
'ನನ್ನ ಕಕ್ಷಿದಾರ (ಮಲ್ಯ) ಬ್ರಿಟನ್‌ನಲ್ಲಿದ್ದು, ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿ ವಾದ ಮುಂದುವರಿಸಲು ನನಗೆ ಸಾಧ್ಯವಾಗುತ್ತಿಲ್ಲ' ಎಂದು ಸೈಗಲ್ ಅವರು ನ್ಯಾಯಪೀಠಕ್ಕೆ ತಿಳಿಸಿದ್ದರು.
'ಮಲ್ಯ ವಿರುದ್ಧ ಬ್ರಿಟನ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಈ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದುವರಿಸಲಾಗದು. ಇನ್ನು ಎಷ್ಟು ದಿನ ಹೀಗೆ ವಿಚಾರಣೆ ಮುಂದೂಡಲು ಸಾಧ್ಯ' ಎಂದೂ ನ್ಯಾಯಪೀಠ ಪ್ರಶ್ನಿಸಿತ್ತು.
ಬ್ಯಾಂಕಿಗೆ ₹ 9,000 ಕೋಟಿ ವಂಚಿಸಿದ ಆರೋಪವನ್ನು ಕೂಡ ಮಲ್ಯ ಎದುರಿಸುತ್ತಿದ್ದಾರೆ.