ನವದೆಹಲಿ:ರಾಜ್ಯಸಭಾ ಸಂಸದ ಹಾಗೂ ಸುಪ್ರೀಂಕೋರ್ಟ್(Supreme court) ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್(Kapil Sibal) ವಿರುದ್ಧ ಝಾಕಿಯಾ ಜಾಫ್ರಿ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣಗಳ ತೀರ್ಪುಗಳನ್ನು ಖಂಡಿಸಿದ್ದಕ್ಕೆ ನ್ಯಾಯಾಂಗ ನಿಂದನೆ(Contempt) ಪ್ರಕ್ರಿಯೆ ಆರಂಭಿಸುವಂತೆ ವಕೀಲ ವಿನೀತ್ ಜಿಂದಾಲ್ ಮಾಡಿದ ಮನವಿಯನ್ನು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್(KK Venugopal) ಗುರುವಾರ ತಿರಸ್ಕರಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಆಗಸ್ಟ್ 6 ರಂದು ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, 2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಖುಲಾಸೆಗೊಳಿಸುವ ವಿಶೇಷ ತನಿಖಾ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದನ್ನು ಸಿಬಲ್ ಖಂಡಿಸಿದ್ದರು.
ಫೆಬ್ರವರಿ 28, 2002 ರಂದು ಗುಲ್ಬರ್ಗ್ ಸೊಸೈಟಿಯಲ್ಲಿ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದಾಗ ಜಾಕಿಯಾ ಜಾಫ್ರಿ ಅವರ ಪತಿ, ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ(Ehsan Zafri) ಅವರನ್ನು ಇರಿದು ಹತ್ಯೆಗೈಯಲಾಗುತ್ತು. ಆಗ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.
ಜನರನ್ನು ಬಂಧಿಸಲು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುವ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳನ್ನು ಎತ್ತಿಹಿಡಿಯುವ ತೀರ್ಪಿನ ಬಗ್ಗೆಯೂ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದರು.
ಈ ತೀರ್ಪುಗಳನ್ನು ಉಲ್ಲೇಖಿಸಿದ ಹಿರಿಯ ವಕೀಲರು, ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳ ಅಭ್ಯಾಸವನ್ನು ಪೂರ್ಣಗೊಳಿಸಿದ ನಂತರ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದರು. "ನೀವು ಸುಪ್ರೀಂ ಕೋರ್ಟ್ ನೀಡಿದ ಪ್ರಗತಿಪರ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ ಆದರೆ ವಾಸ್ತವವಾಗಿ ಏನಾಗುತ್ತದೆ ಎಂಬುದರಲ್ಲಿ ಭಾರಿ ವ್ಯತ್ಯಾಸವಿದೆ." ಎಂದೂ ಅವರು ಹೇಳಿಕೆ ನೀಡಿದ್ದರು.