ಅಮ್ರೇಲಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪಿಎಸಿಎಸ್) ವಿವಿಧೋದ್ದೇಶ ಸಂಸ್ಥೆಗಳಾಗಿ ರೂಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಪೂರಕವಾಗಿ ಕರಡು ಬೈ-ಲಾ ಅನ್ನೂ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಭಾನುವಾರ ಅಮ್ರೇಲಿ ಜಿಲ್ಲೆಯ ಏಳು ಸಹಕಾರ ಸಂಘಟಗಳ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಬೀಜ ಸಂಸ್ಕೃತಿ ಪ್ರಚಾರ ಮತ್ತು ಮಾರುಕಟ್ಟೆ ನಿರ್ವಹಣೆ, ಸಾವಯವ ಉತ್ಪನ್ನಗಳ ಪ್ರಮಾಣೀಕರಣ ಕಾರ್ಯ ನಿರ್ವಹಿಸುವಂತೆ ಬಹುರಾಜ್ಯ ಸಹಕಾರ ಸೊಸೈಟಿಗಳಾಗಿ ಹೊಸರೂಪ ನೀಡುವ ಉದ್ದೇಶ ಸರ್ಕಾರದ್ದಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆ, ಗೋದಾಮು, ಗೋಬರ್ ಗ್ಯಾಸ್ ತಯಾರಿಕೆ, ವಿದ್ಯುತ್ ಬಿಲ್ ಸಂಗ್ರಹ, ನಲ್ ಸೇ ಜಲ್ ಯೋಜನೆ ನಿರ್ವಹಣೆ ಹೊಣೆಗಾರಿಕೆಗಳನ್ನು ಪಿಎಸಿಎಸ್‌ಗಳಿಗೆ ವಹಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಈ ಸಂಬಂಧ ಕರಡು ಬೈ-ಲಾ ಸಿದ್ಧವಾಗಿದೆ. ಪರಾಮರ್ಶೆಗೆ ಸೆಪ್ಟೆಂಬರ್ ಅಂತ್ಯದೊಳಗೆ ಸಂಘಗಳಿಗೆ ಕಳುಹಿಸಲಾಗುತ್ತದೆ. ಸದ್ಯ, ದೇಶದಲ್ಲಿ 65 ಸಾವಿರ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಡಿಸೆಂಬರ್‌ನಿಂದ ಆರಂಭವಾಗಿ ಮುಂದಿನ ಐದು ವರ್ಷಗಳಲ್ಲಿ ಇವುಗಳ ಸಂಖ್ಯೆಯನ್ನು 5 ಲಕ್ಷಕ್ಕೆ ಏರಿಸುವ ಗುರಿ ಇದೆ ಎಂದರು.