HEALTH TIPS

ಜೀಸಸ್ ಮಾತ್ರ ದೇವರು: ರಾಹುಲ್‌ ಭೇಟಿಯಾದ ಪಾದ್ರಿ ಹೇಳಿಕೆ, ವಾಕ್ಸಮರ

 

           ನವದೆಹಲಿ : ಹಿಂದೂ ದೇವತೆ 'ಶಕ್ತಿ' ಹಾಗೂ 'ಜೀಸಸ್' ಕುರಿತಾಗಿ ಕ್ರೈಸ್ತ ಪಾದ್ರಿ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ವಿಡಿಯೊ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

            'ಜೀಸಸ್ ಮಾತ್ರ ದೇವರು ಎಂಬುದಾಗಿ ಪಾದ್ರಿ ಹೇಳಿದ್ದಾರೆ' ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿ ಧೋರಣೆ ತಳೆದಿದೆ ಎಂದಿದೆ. ಆದರೆ, ಭಾರತ್ ಜೋಡೊ ಯಾತ್ರೆಯ ಯಶಸ್ವಿ ಆರಂಭದಿಂದ ಕಂಗೆಟ್ಟಿರುವ ಬಿಜೆಪಿ, ದ್ವೇಷ ಹರಡಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

                ಭಾರತ್ ಜೊಡೊ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ರೈಸ್ತ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿ ಮಾಡಿದ ವಿಡಿಯೊವನ್ನು ಬಿಜೆಪಿಯ ಹಲವು ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 'ಜೀಸಸ್ ನಿಜವಾದ ದೇವರು. ಶಕ್ತಿ ದೇವತೆಯ ರೀತಿ ಅಲ್ಲ' ಎಂಬುದಾಗಿ ಪೊನ್ನಯ್ಯ ಅವರು ಹೇಳಿದ್ದಾರೆ ಎಂಬುದು ಆರೋಪ. ಜೀಸಸ್‌ ಅವರನ್ನು ದೇವರೆಂದು ಪರಿಗಣಿಸಬೇಕೇ ಎಂಬುದಾಗಿ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಪಾದ್ರಿ ಈ ರೀತಿ ಉತ್ತರಿಸಿದರು ಎಂದು ಆರೋಪಿಸಲಾಗಿದೆ.

                ನವರಾತ್ರಿ ಆರಂಭಕ್ಕೂ ಮುನ್ನ ಕಾಂಗ್ರೆಸ್‌ನಿಂದ ಶಕ್ತಿ ದೇವತೆಗೆ ಅವಮಾನವಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕಿಡಿಕಾರಿದ್ದಾರೆ. ವಿಡಿಯೊ ಮೂಲಕ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯ ನೈಜತೆ ಬಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. 'ಕಾಂಗ್ರೆಸ್ ಈ ರೀತಿ ಮಾಡುತ್ತಿರುವುದು ಇದು ಮೊದಲಲ್ಲ. ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುವ ಮೂಲಕ ಹಿಂದೆಯೂ ಅವಮಾನ ಮಾಡಿತ್ತು' ಎಂದು ಅವರು ನೆನಪಿಸಿದ್ದಾರೆ.

                 'ಒಂದು ಧರ್ಮದವರನ್ನು ಓಲೈಸಲು ಮತ್ತೊಂದು ಧರ್ಮಕ್ಕೆ ಅವಮಾನ. ಇದೇನಾ ಭಾರತ್ ಜೋಡೊ? ಕಾಂಗ್ರೆಸ್‌ ಹಾಗೂ ಅದರ ನಾಯಕ ರಾಹುಲ್ ಅವರ ಹಿಂದೂ ವಿರೋಧಿ ಧೋರಣೆ ರಹಸ್ಯವಾಗಿ ಉಳಿದಿಲ್ಲ' ಎಂದು ಪಾತ್ರಾ ಆರೋಪಿಸಿದ್ದಾರೆ.

                   ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ತಿರುಗೇಟು ನೀಡಿದ್ದಾರೆ. 'ಮಹಾತ್ಮ ಗಾಂಧಿ ಹಾಗೂ ನರೇಂದ್ರ ಧಾಬೋಲ್ಕರ್, ಗೋವಿಂದ ಪಾನ್ಸರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಗೆ ಕಾರಣರಾದ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದೊಂದು ರೋಗಗ್ರಸ್ತ ಮನಸ್ಥಿತಿ. ಭಾರತ್ ಜೋಡೊ ಯಾತ್ರೆಯ ಹುರುಪನ್ನು ತಗ್ಗಿಸಲು ಮಾಡುತ್ತಿರುವ ಈ ಯತ್ನಗಳಲ್ಲಿ ಬಿಜೆಪಿ ಯಶ ಕಾಣುವುದಿಲ್ಲ' ಎಂದು ಹೇಳಿದ್ದಾರೆ.

             'ಜೀಸಸ್ ಮಾತ್ರ ದೇವರು ಎಂಬುದಾಗಿ ರಾಹುಲ್ ಭೇಟಿಯ ವೇಳೆ ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ಹೇಳಿದ್ದಾರೆ. ಹಿಂದೂದ್ವೇಷದ ಕಾರಣಕ್ಕೆ ಪಾದ್ರಿ ಈ ಹಿಂದೆ ಬಂಧಿತ
ರಾಗಿದ್ದರು. ಕಾಂಗ್ರೆಸ್‌ನ ದ್ವೇಷದ ಧೋರಣೆಯಿಂದಾಗಿಯೇ 1984ರ ಸಿಖ್‌ ಗಲಭೆ ನಡೆದಿತ್ತು' ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಅವರು ಹೇಳಿದ್ದಾರೆ.

                ಯಾತ್ರೆ: 60 ಕಂಟೇನರ್‌ಗಳಲ್ಲಿ ವಾಸ್ತವ್ಯ:

               ರಾಹುಲ್ ಗಾಂಧಿ ಸೇರಿ 230 ಪಾದಯಾತ್ರಿಗಳು ಪ್ರತಿದಿನ ಉಳಿದುಕೊಳ್ಳಲು 60 ಕಂಟೇನರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಕಂಟೇನರ್‌ಗಳನ್ನು ನಿತ್ಯವೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಟ್ರಕ್‌ಗಳಲ್ಲಿ ಸಾಗಿಸಲಾಗುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 3,570 ಕಿಲೋಮೀಟರ್ ಉದ್ದದ ಭಾರತ್ ಜೋಡೊ ಯಾತ್ರೆಯ ಮಾರ್ಗದುದ್ದಕ್ಕೂ ಇವು ಬಳಕೆಯಾಗಲಿವೆ.

                  ಪ್ರತಿದಿನ ಒಂದು ಸ್ಥಳದಲ್ಲಿ ಶಿಬಿರ ಹೂಡಿದಾಗ, ಕಂಟೇನರ್‌ಗಳನ್ನು ಆ ಜಾಗದಲ್ಲಿ ಇರಿಸಲಾಗುತ್ತದೆ. ಇವುಗಳ ಒಳಗೆ ಟಿ.ವಿ ವ್ಯವಸ್ಥೆ ಇಲ್ಲ. ಇವುಗಳಲ್ಲಿ ಸಭೆಗಳನ್ನು ನಡೆಸುವುದಿಲ್ಲ. ರಾತ್ರಿಯ ವೇಳೆ ಇವುಗಳಲ್ಲಿ ತಂಗಲು ವ್ಯವಸ್ಥೆಯಿದೆ. ಎರಡು, ನಾಲ್ಕು, ಆರು ಹಾಗೂ 12 ಹಾಸಿಗೆಗಳನ್ನು ಇವು ಒಳಗೊಂಡಿವೆ. ರಾಹುಲ್ ಗಾಂಧಿ ಅವರು ಬುಧವಾರ ರಾತ್ರಿಯಿಂದ ಇವೇ ಕಂಟೇನರ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಈ ಕಂಟೇನರ್‌ಗಳು ರೈಲ್ವೆ ಸ್ಲೀಪರ್ ಕಂಪಾರ್ಟ್‌ಮೆಂಟ್ ರೀತಿ ಇವೆ ಎಂದು ಯಾತ್ರಾ ಸಮಿತಿಯ ಮುಖ್ಯಸ್ಥ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ತಮಿಳುನಾಡಿನಲ್ಲಿ ನಾಲ್ಕು ದಿನಗಳ ಭಾರತ್ ಜೋಡೊ ಯಾತ್ರೆ ಶನಿವಾರ ಪೂರ್ಣಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಕಳಿಯಿಕಾವಿಳ ಎಂಬಲ್ಲಿ ಕೇರಳ ಗಡಿ ಪ್ರವೇಶಿಸಿದರು. ಭಾನುವಾರದಿಂದ ಕೇರಳದಲ್ಲಿ ಯಾತ್ರೆ ಆರಂಭವಾಗಲಿದೆ.

                               ರಾಹುಲ್ ಇತಿಹಾಸ ಓದಲಿ: ಶಾ

                ಜೈಪುರ : ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯನ್ನು ಗೃಹಸಚಿವ ಅಮಿತ್ ಶಾ ಟೀಕಿಸಿದ್ದಾರೆ. 'ಭಾರತವು ಒಂದು ದೇಶವೇ ಅಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ, ಈಗ ದೇಶವನ್ನು ಒಗ್ಗೂಡಿಸುವ ನೆಪದಲ್ಲಿ ವಿದೇಶಿ ಟಿ-ಶರ್ಟ್ ಧರಿಸಿ ಯಾತ್ರೆ ಮಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದ್ದಾರೆ.

                ರಾಜಸ್ಥಾನದ ಬೂತ್‌ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಶಾ, ಮತಬ್ಯಾಂಕ್ ಹಾಗೂ ಸಮುದಾಯ ಓಲೈಕೆಯನ್ನು ಕಾಂಗ್ರೆಸ್ ರೂಢಿಸಿಕೊಂಡಿದೆ ಎಂದು ಆರೋಪಿಸಿದರು.

                 'ಭಾರತ ಒಂದು ದೇಶವಲ್ಲ ಎಂದು ರಾಹುಲ್ ಅವರು ಸಂಸತ್ತಿನಲ್ಲಿ ಹೇಳಿದ್ದರು. ಯಾವ ಪುಸ್ತಕ ಓದಿ ಅವರು ಇದನ್ನು ತಿಳಿದುಕೊಂಡಿದ್ದಾರೆ? ಈ ದೇಶಕ್ಕಾಗಿ ಲಕ್ಷ ಲಕ್ಷ ಜನರು ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ಭಾರತವನ್ನು ಜೋಡಿಸಲು ಹೊರಟಿರುವ ರಾಹುಲ್, ಅದಕ್ಕೂ ಮುನ್ನ ಭಾರತದ ಇತಿಹಾಸ ಅಧ್ಯಯನ ಮಾಡಲಿ' ಎಂದು ಶಾ ಸಲಹೆ ನೀಡಿದ್ದಾರೆ.

                  ದುಬಾರಿ ದಿರಿಸು: 'ರಾಹುಲ್ ಧರಿಸಿದ್ದ ಟಿ-ಶರ್ಟ್ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಪ್ರಧಾನಿ ಮೋದಿ ಅವರು ₹10 ಲಕ್ಷ ಮೌಲ್ಯದ ಸೂಟ್, ₹1.5 ಲಕ್ಷ ಬೆಲೆಯ ಕನ್ನಡಕ ಧರಿಸಬಹುದೇ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಪ್ರಶ್ನಿಸಿದ್ದಾರೆ.

***

ಚುನಾವಣೆಗಳು ಬಂದಾಗ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಹೋಗುತ್ತಾರೆ. ಆದರೆ ಚುನಾವಣೆ ಮುಗಿದಾಗ ಅವರ 'ಹಿಂದೂ ವಿರೋಧಿ' ಮುಖ ಹೊರಬರುತ್ತದೆ

- ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

ವಿಡಿಯೊದಲ್ಲಿ ಕೇಳಿಬರುವ ಧ್ವನಿಗೂ ರಾಹುಲ್ ಗಾಂಧಿಗೂ ಸಂಬಂಧವೇ ಇಲ್ಲ. ಆದರೂ, ಬಿಜೆಪಿಯ ದ್ವೇಷದ ಕಾರ್ಖಾನೆಯು ಟ್ವೀಟ್‌ ಹಂಚಿಕೊಳ್ಳುತ್ತಿದೆ

- ಜೈರಾಮ್ ರಮೇಶ್ , ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries