ಶಿಲ್ಲಾಂಗ್: ಭಾರತ ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಧ್ಯೇಯ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಲ್ಲಿ ಭಾನುವಾರ ಹೇಳಿದರು.
ಎರಡು ದಿನಗಳ ಪ್ರವಾಸಕ್ಕಾಗಿ ಅವರು ಭಾನುವಾರ ಮೇಘಾಲಯಕ್ಕೆ ಆಗಮಿಸಿದ್ದಾರೆ.
ಪ್ರವಾದ ಮೊದಲ ದಿನ ಶಿಲ್ಲಾಂಗ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, 'ನಮ್ಮ ಸಮಾಜವನ್ನು ಸಂಘಟಿಸುವುದು ಆರ್‌ಎಸ್‌ಎಸ್ ಧ್ಯೇಯವಾಗಿದೆ. ಇದರಿಂದ ದೇಶವು ಸರ್ವತೋಮುಖ ಬೆಳವಣಿಗೆಯನ್ನು ಕಾಣುತ್ತದೆ. ವೈಯಕ್ತಿಕ ಸ್ವಾರ್ಥವನ್ನು ಬದಿಗಿರಿಸಿ ದೇಶಕ್ಕಾಗಿ ತ್ಯಾಗ ಮಾಡಬೇಕು ಎಂಬುದನ್ನು ಆರ್‌ಎಸ್‌ಎಸ್ ಕಲಿಸಿಕೊಡುತ್ತದೆ' ಎಂದರು.
ಆಧ್ಯಾತ್ಮದ ನೆಲೆಗಟ್ಟಿನಲ್ಲಿ ತಲೆಮಾರುಗಳಿಂದ ಸಾಗಿ ಬಂದಿರುವ ಮೌಲ್ಯಗಳನ್ನು ಅಂತರ್ಗತ ಮಾಡಿಕೊಂಡಿರುವುದು ದೇಶದ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಭೌಗೋಳಿಕ- ಸಾಂಸ್ಕೃತಿಕ ಗುರುತಿನ ಪ್ರಕಾರ 'ಭಾರತೀಯ' ಮತ್ತು 'ಹಿಂದೂ' ಎಂಬ ಪದಗಳು ಸಮಾನಾರ್ಥಕ ಪದಗಳಾಗಿವೆ. ನಾವೆಲ್ಲರೂ ಹಿಂದೂಗಳೇ ಎಂದು ಅವರು ಹೇಳಿದರು.
'ದೇಶದ ಪ್ರಾಚೀನ ಇತಿಹಾಸದಿಂದ ನಾವು ತ್ಯಾಗ ಸಂಸ್ಕೃತಿಯನ್ನು ಕಲಿತಿದ್ದೇವೆ. ಜಪಾನ್, ಕೊರಿಯಾಗಳಂಥ ದೇಶಗಳನ್ನು ಸಂದರ್ಶಿಸಿದ ನಮ್ಮ ಪೂರ್ವಜರೂ ಆ ದೇಶಗಳಿಗೆ ತ್ಯಾಗ ಮನೋಭಾವವನ್ನು ಕಲಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಹಲವು ದೇಶಗಳಿಗೆ ಲಸಿಕೆ ಕಳುಹಿಸಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದ್ದೇವೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಶ್ರೀಲಂಕಾಕ್ಕೆ ನೆರವು ನೀಡಿದ್ದೇವೆ.
'ಭಾರತ ಸದೃಢವಾದಾಗ, ಎಲ್ಲಾ ಪ್ರಜೆಗಳೂ ಸದೃಢವಾಗುತ್ತಾರೆ' ಎಂದು ಅವರು ಹೇಳಿದರು.