ಪ್ರಸಕ್ತ ವರ್ಷದ ಕೇಂದ್ರ ಬಜೆಟ್‍ನಲ್ಲಿ ಪ್ರಸ್ತಾವಿಸಿರುವ ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾನಿಲಯ ಮುಂದಿನ ಜನವರಿಯಿಂದ ಕೆಲ ಕೋರ್ಸ್‍ಗಳನ್ನು ಆರಂಭಿಸಲಿದ್ದು, ಮುಂದಿನ ವರ್ಷದ ಜೂನ್-ಜುಲೈ ವೇಳೆಗೆ ಸಂಪೂರ್ಣ ಕಾರ್ಯ ನಿರ್ವಹಣೆಗೆ ಸಜ್ಜಾಗಲಿವೆ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಹೇಳಿದ್ದಾರೆ.
ಹಾಲಿ ಇರುವ ಆನ್‍ಲೈನ್ ಶಿಕ್ಷಣ ಮಾರ್ಗಸೂಚಿಯನ್ನು ಪರಿಷ್ಕರಿಸಲು ಕೂಡಾ ಯುಜಿಸಿ ನಿರ್ಧರಿಸಿದ್ದು, ಅದನ್ನು ಡಿಜಿಟಲ್ ವಿವಿ ಜತೆ ಸಮನ್ವಯಗೊಳಿಸಲು ಉದ್ದೇಶಿಸಲಾಗಿದೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಫೆ. 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಶಿಕ್ಷಣ ಒದಗಿಸುವ ಸಲುವಾಗಿ ದೇಶದಲ್ಲಿ ಡಿಜಿಟಲ್ ವಿಶ್ವವಿದ್ಯಾನಿಲಯ ಸ್ಥಾಪನೆಯನ್ನು ಪ್ರಸ್ತಾಪಿಸಿದ್ದರು ಹಾಗೂ "ಹಬ್ ಆಯಂಡ್ ಸ್ಪೋಕ್ ಮಾಡೆಲ್"ನಲ್ಲಿ ಇದನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದರು.
ಈ ಮಾದರಿಯಲ್ಲಿ ಕೇಂದ್ರೀಕೃತ ಹಬ್‍ನಿಂದ ಡಿಜಿಟಲ್ ಶಿಕ್ಷಣ ನೀಡುವ ವ್ಯವಸ್ಥೆ ಇರುತ್ತದೆ. ಪ್ರತಿಯೊಂದನ್ನೂ ಈ ಹಬ್‍ನಲ್ಲಿ ಸೃಷ್ಟಿಸಲಾಗುತ್ತದೆ ಅಥವಾ ಗ್ರಾಹಕರಿಗೆ ವಿತರಿಸುವ ಸಲುವಾಗಿ ಹಬ್‍ಗೆ ಕಳುಹಿಸಲಾಗುತ್ತದೆ. ಈ ಹಬ್‍ನಿಂದ ಕಲಿಕಾ ಸಾಮಗ್ರಿಗಳು ಸಂಸ್ಕರಣೆ ಮತ್ತು ವಿತರಣೆಗಾಗಿ ಸ್ಪೋಕ್ಸ್ ಎಂಬ ಕಂಪನಿಗಳ ಮಾಲಕತ್ವದ ಸಣ್ಣ ಸ್ಥಳಗಳಿಗೆ ವರ್ಗಾವಣೆಯಾಗುತ್ತದೆ. ಇಲ್ಲಿ ವಿಶ್ವವಿದ್ಯಾನಿಲಯ "ಹಬ್" ಆಗಿ ಕಾರ್ಯ ನಿರ್ವಹಿಸಲಿದ್ದು, ಹಲವು ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ದೇಶದ ಹೊರಗಿರುವ ಹಲವು ಕೇಂದ್ರಗಳು ಸ್ಪೋಕ್ಸ್ ಆಗಿ ಕಾರ್ಯ ನಿರ್ವಹಿಸಲಿವೆ ಎಂದು ಕುಮಾರ್ ವಿವರಿಸಿದರು.
ಡಿಜಿಟಲ್ ವಿವಿ ಸರ್ಟಿಫಿಕೇಟ್ ಕೋರ್ಸ್‍ಗಳು, ಡಿಪ್ಲೋಮಾಗಳು ಮತ್ತು ಸುಸಜ್ಜಿತ ಪದವಿ ಮತ್ತು
ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ನೀಡಲಿವೆ ಎಂದು ಅವರು ಹೇಳಿದ್ದಾರೆ. ಜನವರಿಯಿಂದ ಡಿಜಿಟಲ್ ವಿವಿ ಕೆಲ ಕೋರ್ಸ್‍ಗಳನ್ನು ಆರಂಭಿಸಲಿದ್ದು, ಜೂನ್-ಜುಲೈ ವೇಳೆಗೆ ಸಮಗ್ರವಾಗಿ ಕಾರ್ಯಾರಂಭ ಮಾಡಲಿದೆ ಎಂದರು. ಈ ಬಗ್ಗೆ hindustantimes.com ವರದಿ ಮಾಡಿದೆ.