ಮಲಪ್ಪುರಂ: ಮದುವೆಗೂ ಮುನ್ನ ಅಥವಾ ನಂತರ, ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್ ಫೋಟೋಶೂಟ್ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್ ಫೋಟೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ.
ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಆದರೆ, ಕೇರಳದ ವಧುವೊಬ್ಬಳು ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು, ಈ ಮೂಲಕವು ಸರ್ಕಾರದ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ನೀಲಂಬುರ್ ಪಟ್ಟಣದಲ್ಲಿರುವ ರಸ್ತೆಯು ಗುಂಡಿಮಯವಾಗಿದೆ. ರಸ್ತೆಯ ಈ ಶೋಚನಿಯ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂಬ ಉದ್ದೇಶದಿಂದ ಪೂಕೊಟ್ಟುಂಪದಂ ಮೂಲದ ಸುಜೀಶಾ ಎಂಬಾಕೆ ರಸ್ತೆ ಗುಂಡಿಗಳ ನಡುವೆಯೇ ವೆಡ್ಡಿಂಗ ಫೋಟೋಶೂಟ್ ಮಾಡಿಸಿದ್ದಾರೆ.
ನೀಲಂಬುರ್ನಲ್ಲಿರುವ ಆಯರೋ ವೆಡ್ಡಿಂಗ್ ಕಂಪನಿ ಈ ಫೋಟೋಶೂಟ್ ಮಾಡಿದೆ. ರಸ್ತೆಯು ಗುಂಡಿಮಯವಾಗಿದ್ದು, ಗುಂಡಿಗಳಲ್ಲಿ ನೀರು ತುಂಬಿ ಸವಾರರು ಬಹುದಿನಗಳಿಂದ ಪರದಾಡುವಂತಾಗಿದೆ. ಹೀಗಾಗಿ ಸಂಪೂರ್ಣ ಹಾಳಾದ ರಸ್ತೆಯ ಮಧ್ಯೆ ನಿಂತು ಫೋಟೋಶೂಟ್ ನಡೆಸುವುದು ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸುವ ಒಂದು ಸಾಧನವಾಗಿದೆ ಎಂದು ಛಾಯಾಗ್ರಾಹಕ ಆಶಿಕ್ ಹೇಳಿದರು. ಈ ಯೋಜನೆಯನ್ನು ವಧುವಿಗೆ ಸೂಚಿಸಿದಾಗ, ಅವರು ಸಹ ಒಪ್ಪಿಗೆ ನೀಡಿದರು ಎಂದು ಆಶಿಕ್ ತಿಳಿಸಿದರು.
ಹಲವಾರು ಇನ್ಸ್ಟಾಗ್ರಾಂ ಬಳಕೆದಾರರು ಫೋಟೋಶೂಟ್‌ಗೆ ಧನಾತ್ಮಕ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು, ವಧುವಿಕೆ ಬಹುಪರಾಕ್ ಎನ್ನುತ್ತಿದ್ದಾರೆ.