ಚಂಡೀಗಡ: ದೆಹಲಿಯಲ್ಲಿ ಪ್ರತೀ ವರ್ಷ ಮಾಲಿನ್ಯ ಸೃಷ್ಟಿಸುತ್ತಿರುವ ರೈತರ ಕೃಷಿ ತ್ಯಾಜ್ಯ ಸುಡುವಿಕೆ ಸಮಸ್ಯೆಗೆ ಅಂತ್ಯ ಹಾಡಲು ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಕೈಜೋಡಿಸಿವೆ.
ಬೆಳೆ ತ್ಯಾಜ್ಯ ನಿರ್ವಹಣೆಗೆ ಸದ್ಯದಲ್ಲೇ ಪೈಲಟ್ ಯೋಜನೆ ಆರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಈ ಯೋಜನೆಯಡಿ ಬೆಳೆ ಕಟಾವು ಮಾಡಿದ ಬಳಿಕ ಪಂಜಾಬ್ ರಾಜ್ಯದ 5,000 ಎಕರೆ ಕೃಷಿ ಜಮೀನಿನಲ್ಲಿ ಜೈವಿಕ ವಿಘಟಕಗಳನ್ನು ಸಿಂಪಡಣೆ ಮಾಡಲಾಗುತ್ತದೆ ಎಂದು ಗುರುವಾರ ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಚರ್ಚಿಸಲು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು ಎಂದು ಪಂಜಾಬ್‌ನ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ. ಬುಧವಾರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದ ಧಲಿವಾಲ್ ಅವರು, ಕೃಷಿ ಉಳಿಕೆ ಸುಡುವುದರಿಂದ ಉಂಟಾಗುವ ಮಾಲಿನ್ಯದ ಕುರಿತಂತೆ ಚರ್ಚಿಸಿದ್ದಾರೆ. ಬಳಿಕ, ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಜೊತೆಯೂ ಚರ್ಚಿಸಿದ್ದಾರೆ.
ಪ್ರಕಟಣೆ ಪ್ರಕಾರ, ದೆಹಲಿ ಮತ್ತು ಪಂಜಾಬ್ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಈ ಪೈಲಟ್ ಯೋಜನೆ ಪ್ರಾರಂಭಿಸಲಾಗುತ್ತಿದೆ. ಯೋಜನೆ ಅನ್ವಯ, ಕೃಷಿಯಲ್ಲಿ ಉಳಿದ ಹುಲ್ಲಿನ ಮೇಲೆ ಪುಸಾ ಜೈವಿಕ ವಿಘಟಕವನ್ನು ಸಿಂಪಡಣೆ ಮಾಡಲಾಗುತ್ತದೆ. ಅದರಿಂದ ಹುಲ್ಲು ಕೊಳೆತು ಮಣ್ಣು ಸೇರುತ್ತದೆ.. ಇದರಿಂದ ಸುಡುವ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಎಂದು ಪಂಜಾಬ್ ಕೃಷಿ ಸಚಿವರು ಹೇಳಿದ್ದಾರೆ.
ಪಂಜಾಬ್ ಸರ್ಕಾರವು ಗದ್ದೆಗಳಲ್ಲಿ ಉಳಿಯುವ ಹುಲ್ಲಿನ ನಿರ್ವಹಣೆಗೆ ಎಲ್ಲ ತಯಾರಿ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಉಪಕರಣಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಕಣ್ಗಾವಲಿಗಾಗಿ ಎಲ್ಲ ಜಿಲ್ಲೆಗಳಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪುಸಾ ಜೈವಿಕ ವಿಘಟಕ: ಕೃಷಿಯಲ್ಲಿ ಉಳಿದ ಹುಲ್ಲು ಸುಡುವಿಕೆಗೆ ಪರಿಹಾರವಾಗಿ, ಪುಸಾ ವಿಘಟಕಗಳನ್ನು ಬಳಸಲಾಗುತ್ತಿದೆ.
'ಪುಸಾ ವಿಘಟಕ' ದ್ರಾವಣವನ್ನು ಬೆಳೆಗಳ ಮೇಲೆ ಸಿಂಪಡಿಸುವುದರಿಂದ ಅದು ಕೊಳೆತು ಮಣ್ಣು ಸೇರುತ್ತದೆ.