ಅಹಮದಾಬಾದ್: 'ಭಾರತವು ಸಂಶೋಧನೆ ಮತ್ತು ನಾವೀನ್ಯ ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಯಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಇಲ್ಲಿ ಆಯೋಜಿಸಿದ್ದ ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 'ಈ ಉದ್ದೇಶ ಈಡೇರಿಕೆಗಾಗಿ ರಾಜ್ಯ ಸರ್ಕಾರಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿ ಆಧುನಿಕ ನೀತಿಗಳನ್ನು ರೂಪಿಸಬೇಕು' ಎಂದರು.
'2014ರಿಂದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯವಾಗಿ ಹೂಡಿಕೆ ಹೆಚ್ಚಳವಾಗುತ್ತಿದೆ. ಹೀಗಾಗಿ, ದೇಶವು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಜೊತೆಗೆ ಜೈ ಅನುಸಂಧಾನ (ಸಂಶೋಧನೆ) ಎಂಬ ಹೊಸ ಮಂತ್ರದೊಂದಿಗೆ ಮುನ್ನಡೆಯಲಿದೆ' ಎಂದು ಹೇಳಿದರು.
'ಪಾಶ್ಚಾತ್ಯ ರಾಷ್ಟ್ರಗಳ ರೀತಿಯಲ್ಲಿ ಭಾರತದಲ್ಲಿ ನಮ್ಮ ವಿಜ್ಞಾನಿಗಳ ಸಾಧನೆಗಳನ್ನು ಸಂಭ್ರಮಿಸುವ ಪರಿಪಾಟ ಇಲ್ಲ. ಈ ಕಾರಣಕ್ಕಾಗಿಯೇ ನಮ್ಮ ಸಮಾಜದ ಬಹುತೇಕ ಜನರು ವಿಜ್ಞಾನದಿಂದ ದೂರವೇ ಉಳಿಯುವಂತಾಗಿದೆ' ಎಂದು ಅವರು ವಿಷಾದಿಸಿದರು.
'ವಿಜ್ಞಾನ ಮತ್ತು ತಂತ್ರಜ್ಞಾನದ ಫಲ ಸ್ಥಳೀಯ ಮಟ್ಟದವರೆಗೆ ತಲುಪುವಂತೆ ಮಾಡಲು ನಾವು ಶ್ರಮಿಸಬೇಕು. ರಾಜ್ಯಗಳು, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು' ಎಂದೂ ಪ್ರಧಾನಿ ಹೇಳಿದರು.
2 ರಾಜ್ಯಗಳು ಗೈರು: ವಿಜ್ಞಾನ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಎರಡು ದಿನಗಳ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳು ಇದರಲ್ಲಿ ಪಾಲ್ಗೊಳ್ಳದೆ ಇದ್ದುದು ಗಮನ ಸೆಳೆಯಿತು.