ಕಾಸರಗೋಡು: ಶಾಲಾ ಉದ್ದೇಶಗಳಿಗಾಗಿ ಪೆನ್ನುಗಳು ಮತ್ತು ಪುಸ್ತಕಗಳನ್ನು ಒಳಗೊಂಡಂತೆ ಮಕ್ಕಳ ಸ್ಟೇಷನರಿ ಅಂಗಡಿಯೊಂದನ್ನು ವಿದ್ಯಾರ್ಥಿಗಳೇ ಸ್ವತಃ ನಿರ್ಮಿಸಿ ಗಮನ ಸೆಳೆದಿರುವರು. ಮಕ್ಕಳೇ ಆರಂಭಿಸಿರುವ ಈ ಅಂಗಡಿಗೆ ಹೋನೆಸ್ಟೀ ಶೋಫ್(ಪ್ರಾಮಾಣಿಕ ಅಂಗಡಿ)ಎಂದು ಹೆಸರಿಸಲಾಗಿದೆ. ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂತಹದೊಂದು ಸ್ವಾವಲಂಬಿ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಈಗ ಇಲ್ಲಿನ ಮಕ್ಕಳು ಅಧ್ಯಯನ ಸಾಮಗ್ರಿ ಖರೀದಿಸಲು ಬೇರೆ ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಅಂಗಡಿಯಲ್ಲಿ ಪೆನ್ಸಿಲ್, ಪೆನ್ನು, ನೋಟ್ ಪುಸ್ತಕಗಳು, ಕಲರ್ ಪೆನ್, ರಬ್ಬರ್ ಸೇರಿದಂತೆ ವಸ್ತುಗಳಿರುತ್ತವೆ.
ಶಾಲೆಯ ಸಭಾಂಗಣದಲ್ಲಿ ಅಂಗಡಿಯನ್ನು ಸ್ಥಾಪಿಸಲಾಗಿದೆ. ಹೋನೆಸ್ಟೀ ಮಳಿಗೆ ವಿದ್ಯಾರ್ಥಿ ಪೋಲೀಸರ ಕಲ್ಪನೆಯ ಕೂಸು(ಎಸ್.ಪಿ.ಸಿ-ಸ್ಟೂಡೆಂಟ್ ಪೋಲೀಸ್ ಕೆಡೆಟ್) ಈ ತಂಡದಲ್ಲಿ 88 ವಿದ್ಯಾರ್ಥಿಗಳಿದ್ದಾರೆ. ಅವರ ನಿಧಿಯ ಹಣ ಬಳಸಿ ಮೂಲಧನವಾಗಿಸಿ ಅಂಗಡಿಗೆ ಸರಕುಗಳನ್ನು ಖರೀದಿಸಲಾಗಿದೆ. ಪ್ರಾರಂಭದಲ್ಲಿ ಅಂಗಡಿಗೆ 2000 ರೂ.ಅಸಲು ಬಳಸಲಾಗಿದೆ. ಮೊದಲ ದಿನ 406 ಮೌಲ್ಯದ ವಸ್ತುಗಳು ಮಾರಾಟವಾಗಿವೆ. ಕಲರ್ ಪೆನ್ಸಿಲ್‍ಗಳು ಖಾಲಿಯಾದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಸ್ಟಾಕ್ ಕೇಳಿದ್ದಾರೆ.
ಮೇಲಧಿಕಾರಿ ಅಥವಾ ಕೆಲಸಗಾರರು(ಶೋಪ್ ಕೀಪರ್) ಇಲ್ಲದ ಕಾರಣ ಇಲ್ಲಿನ ಡಬ್ಬದಲ್ಲಿ ಹಣ ಹಾಕಿದ ಬಳಿಕ ಅಗತ್ಯ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಬಹುದು. ಉಳಿದ ಚಿಲ್ಲರೆ ಮೊತ್ತ ಬೇಕಿದ್ದರೆ ಪೆಟ್ಟಿಗೆಯಿಂದ ತೆಗೆದುಕೊಳ್ಳಬಹುದು. ಪ್ರತಿ ವಸ್ತುಗಳ ಬೆಲೆ ಪಟ್ಟಿಯನ್ನು ಪ್ರದರ್ಶಿಸಲಾಗಿದೆ. ಈ ಯೋಜನೆಯು ಮಕ್ಕಳ ಪ್ರಾಮಾಣಿಕತೆಯನ್ನು(ಹೋನೆಸ್ಟಿ) ಪೋಷಿಸುವ ಗುರಿಯನ್ನು ಹೊಂದಿದೆ. ಹೊರಗಿನ ಅಂಗಡಿಗಿಂತ ಕಡಿಮೆ ಬೆಲೆಗೆ ಪ್ರಾಮಾಣಿಕತೆ ಅಂಗಡಿಯಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಶಾಲೆಯ ಅಂಗಡಿಯು ಮಕ್ಕಳನ್ನು ಶಾಲಾವರಣ ಬಿಟ್ಟು ಆಗಾಗ್ಗೆ ಹೊರಗಿನ ಅಂಗಡಿಗಳಿಗೆ ಹೋಗದಂತೆ ನಿಯಂತ್ರಿಸಲೂ ಕಾರಣವಾಗಲಿದೆ. ಇಲ್ಲಿ ಪ್ರಸ್ತುತ 1100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಹೊಸದುರ್ಗ ಎಸ್ ಐ ಕೆ.ಪಿ.ಸತೀಶ್ ಹೋನೆಸ್ಟೀ ಅಂಗಡಿ ಉದ್ಘಾಟಿಸಿದರು. ತಾ.ಪಂ.ಅಧ್ಯಕ್ಷ ಸಂತೋಷ ಕುಶಾಲನಗರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಎ. ವಿ.ಸುರೇಶ್ ಬಾಬು, ಜನಮೈತ್ರಿ ಪೋಲೀಸ್ ಅಧಿಕಾರಿ ಪ್ರಮೋದ್, ಹಿರಿಯ ಸಹಾಯಕ ಓ.ರಾಜೇಶ್, ಶಾಲಾ ನೌಕರ ಸಂಘದ ಕಾರ್ಯದರ್ಶಿ ಬಾಬುರಾಜ್ ಮಾತನಾಡಿದರು. ಶಿಕ್ಷಕರಾದ ಟಿ.ವಿ.ಸಿಂಧು, ಟಿ.ವಹೀದತ್ ನೇತೃತ್ವ ವಹಿಸಿದ್ದರು. ಮುಖ್ಯಶಿಕ್ಷಕ ಪಿ.ಗಂಗಾಧರನ್ ಸ್ವಾಗತಿಸಿದರು.
ಶಾಲೆಯ ಒಳಗೆ ಮಕ್ಕಳ ಹೋನೆಸ್ಟಿ ಅಂಗಡಿ: ಹೀಗೊಂದು ಪ್ರಯೋಗ
0
ಸೆಪ್ಟೆಂಬರ್ 21, 2022
Tags