ಪೆರ್ಲ: ಕೃಷಿಕರೊಂದಿಗೆ ನಿರಂತರ ಸಂವಹನ ನಡೆಸುವುದರ ಜತೆಗೆ ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿರುವ ಕೃಷಿ ವಿಜ್ಞಾನಿಗಳು ಅಪ್‍ಡೇಟ್ ಆಗಿರಲು ಸಾಧ್ಯ ಎಂದು ಹಿರಿಯ ಪತ್ರಕರ್ತ, ಶ್ರೀಪಡ್ರೆ ತಿಳಿಸಿದ್ದಾರೆ.
ಅವರು ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಅಡಕೆಯ ಶಿಲೀಂಧ್ರ ರೋಗ ನಿಯಂತ್ರಣ-ಪೋಷಕಾಂಶ ನಿರ್ವಹಣೆ ಬಗ್ಗೆ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುಸ್ತಕ, ಮಸ್ತಕ, ಪ್ರಕೃತಿ ಇವುಗಳು ಜ್ಞಾನಾರ್ಜನೆಗಿರುವ ದಾರಿಯಾಗಿದ್ದು, ಕೃಷಿವಿಜ್ಞಾನಿಗಳು ಮಣ್ಣಿನೊಂದಿಗೆ ಬೆರೆತು ನಡೆಸುವ ಚಟುವಟಿಕೆಗಳು ಹೆಚ್ಚು ಫಲಪ್ರದವಾಗಿರುತ್ತದೆ. ಕೃಷಿ ವಿಜ್ಞಾನಿಗಳು ಕೇವಲ ಪುಸ್ತಕಕ್ಕೆ ಸೀಮಿತವಾಗಿರದೆ, ಪ್ರಗತಿಪರ ಕೃಷಿಕರೊಂದಿಗೆ ಆಶಯವಿನಿಮಯ ನಡೆಸುವುದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ. ಇದರಿಂದ ಕೃಷಿಕರು ಮತ್ತು ಕೃಷಿ ವಿಜ್ಞಾನಿಗಳ ನಡುವಿನ ಬಾಂಧವ್ಯ ಹೆಚ್ಚಲು ಸಹಕಾರಿಯಾಗುತ್ತದೆ. ಅಡಕೆ ಬೆಲೆ ಹೆಚ್ಚಾಗುತ್ತಿದ್ದಂತೆ ಕೃಷಿಗೆ ಬಾಧಿಸುವ ರೋಗಗಳೂ ಹೆಚ್ಚುತ್ತಿರುವುದು ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಸಿಪಿಸಿಆರ್‍ಐ ಕಾಸರಗೋಡಿನ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ. ರವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಎಂ. ರಾಮಚಂದ್ರ, ಕೃಷಿಕ ಶ್ರೀಹರಿ ಭಟ್ ಸಜಂಗದ್ದೆ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ ಖಂಡಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಕೆ.ವೈ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ನಡೆದ ಸಂವಾದದಲ್ಲಿ ಅಡಕೆ ಮರದ ಆರೋಗ್ಯ ವರ್ಧನೆಯಲ್ಲಿ ಪೋಷಕಾಂಶ ನಿರ್ವಹಣೆಯ ಮಹತ್ವದ ಬಗ್ಗೆ ಡಾ. ರವಿ ಭಟ್, ಅಡಕೆ ತೋಟದ ಸಮಪರ್ಕ ಪೋಷಕಾಂಶ ನಿರ್ವಹಣೆ ಬಗ್ಗೆ ಭವಿಷ್ಯ, ಕಂತುಗಳಲ್ಲಿ ಗೊಬ್ಬರ ನೀಡಿಕೆ-ಕೃಷಿಕಾನುಭವದ ಬಗ್ಗೆ ಶಿವಪ್ರಕಾಶ್ ಪಾಲೆಪ್ಪಾಡಿ, ಅಡಕೆಯ ಹಿಂಗಾರ ಒಣಗುವ ರೋಗ, ಎಲೆಚುಕ್ಕೆ, ಬುಡಕೊಳೆ ಮತ್ತಿತರ ಶಿಲೀಂಧ್ರ ರೋಗಗಳ ಸಮಗ್ರ ನಿರ್ವಹಣೆ ವಿಷಯದಲ್ಲಿ ಡಾ. ಪ್ರತಿಭಾ ವಿ.ಎಚ್ ಹಾಗೂ ಡಾ. ತವಪ್ರಕಾಶ್ ಪಾಂಡ್ಯನ್, ಅಡಕೆ ತೋಟದಲ್ಲಿ ಸ್ವಚ್ಛತೆಯ ಮಹತ್ವದ ಕೃಷಿಕಾನುಭವದ ಬಗ್ಗೆ ಡಾ. ವೇಣುಗೋಪಾಲ್ ಕಳೆಯತ್ತೋಡಿ ವಿಷಯ ಮಂಡಿಸಿದರು. ಈ ಸಂದರ್ಭ ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
(ಸ್ವರ್ಗ ಸವಾಮಿ ವಿವೇಕಾನಂದ ಶಾಲೆಯಲ್ಲಿ ನಡೆದ ವಿಚಾರಗೋಷ್ಠಿ,ಸ ಂವಾದ ಕಾರ್ಯಕ್ರಮವನ್ನು ಶ್ರೀಪಡ್ರೆ ಉದ್ಘಾಟಿಸಿದರು.)